ಸರಕಾರದಲ್ಲಿನ ಸಣ್ಣಪುಟ್ಟ ಗೊಂದಲಗಳು ತನ್ನಷ್ಟಕ್ಕೆ ನಿವಾರಣೆ: ಸಚಿವ ಕೋಟ

Update: 2019-08-22 15:00 GMT

ಉಡುಪಿ, ಆ.22: ರಾಜ್ಯ ಸರಕಾರದ ಸಂಪುಟ ವಿಸ್ತರಣೆಯಾಗಿದ್ದು, ಇಂದು ಅಥವಾ ನಾಳೆ ಖಾತೆ ಹಂಚಿಕೆಯಾಗಲಿದೆ. ಸದ್ಯ ಸಚಿವರೆಲ್ಲರೂ ಜಿಲ್ಲಾ ಪ್ರವಾಸದಲ್ಲಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಈಗ ಇರುವ ಸಣ್ಣ ಪುಟ್ಟ ಗೊಂದಲಗಳು ತನ್ನಷ್ಟಕ್ಕೆ ನಿವಾರಣೆಯಾಗಿವೆ ಎಂದು ನೂತನ ರಾಜ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೋಸ್ತಿ ಸರಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡರು ಇಷ್ಟು ತಡವಾಗಿ ಈ ಹೇಳಿಕೆ ಯಾಕೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ದೇವೇಗೌಡರ ಹೇಳಿಕೆ ನಿಜ ಇರಬಹುದು. ಸಿದ್ದರಾಮಯ್ಯ ನವರೇ ಇದಕ್ಕೆ ಉತ್ತರ ಕೊಡಬೇಕು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ರೀತಿಯಲ್ಲಿ ಪಕ್ಷ ಬೆಳೆಸುತ್ತೇವೆ ಎಂಬ ನಳಿನ್ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಕರಾವಳಿಯಲ್ಲಿ ಬಿಜೆಪಿ ಬೂತ್ ಮಟ್ಟದಿಂದ ಗಟ್ಟಿಯಿದೆ. ಯುವಕರಲ್ಲಿ ರಾಷ್ಟ್ರಭಕ್ತಿ ಬೆಳೆಸಿದ್ದೇವೆ. ವ್ಯಕ್ತಿ, ಪಕ್ಷಕ್ಕಿಂತ ರಾಷ್ಟ್ರಮುಖ್ಯ ಎಂಬುದು ನಮ್ಮ ಧ್ಯೇಯವಾಗಿದೆ. ಸೈದ್ಧಾಂತಿಕ ಧೋರಣೆ, ಸಂಘಟನೆ ಮೂಲಕ ಪಕ್ಷವನ್ನು ಕಟ್ಟುತ್ತೇವೆ. ನಳಿನ್ ಹೇಳಿಕೆ ಹಿಂದೆ ಬೇರೆ ಯಾವ ಅರ್ಥವೂ ಇಲ್ಲ ಎಂದು ಕೋಟ ಸ್ಪಷ್ಟಪಡಿಸಿದರು.

ದ.ಕ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಸಂಬಂಧ ಹಲವು ಬೇಡಿಕೆಗಳು ಮುಖ್ಯ ಮಂತ್ರಿಗೆ ಬಂದಿವೆ. ಸದ್ಯ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಜವಾಬ್ದಾರಿ ಯನ್ನು ನನಗೆ ವಹಿಸಲಾಗಿದೆ. ಕಾಂಗ್ರೆಸ್ -ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದವರು ಬಿಜೆಪಿ ಸೇರಲಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಒಟ್ಟಾಗಿ ಒಂದಾಗಿ ಹೋಗಬೇಕಾದ ಅಗತ್ಯ ಇದೆ ಎಂದರು.

ಮುಖ್ಯಮಂತ್ರಿ ಪರಿಹಾರ ನಿಧಿ ಪಾರದರ್ಶಕವಾಗಿಯೇ ಇದೆ. ಸಲಹೆಗಳು ಬಂದರೆ ಇನ್ನೂ ಚೆನ್ನಾಗಿ ಮಾಡಬಹುದು. ವಸ್ತು, ಹಣ ರೂಪದಲ್ಲಿ ಪರಿಹಾರ ಬಂದಿದೆ. ಪಾರದರ್ಶಕತೆ ವಿಚಾರದಲ್ಲಿ ಯಾವುದೇ ಲೋಪ ಇಲ್ಲ. ಪರಿಹಾರ ವಿತರಣೆಗೆ ಯಾವುದೇ ಸಮಸ್ಯೆ ಸರಕಾರಕ್ಕಿಲ್ಲ. ಜನರಿಂದ ಬಂದ ಸಹಾಯ ಸಂತ್ರಸ್ತರಿಗೆ ಸಲ್ಲಿಕೆಯಾಗಲಿದೆ ಎಂದು ಸಚಿವರು ಹೇಳಿದರು.

ಐದು ಬಾರಿ ಶಾಸಕರಾಗಿ ಆಯ್ಕೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಚುನಾವಣೆಯಲ್ಲಿ ಗೆದ್ದವರಿಗೂ ಸಚಿವ ಸ್ಥಾನ ನೀಡ ಲಾಗಿದೆ. ಮೇಲ್ಮನೆಗೆ ಸಚಿವ ಸ್ಥಾನ ಕೊಡುವ ನಿಯಮಾವಳಿ ಇದೆ. ಅದರಂತೆ ವಿಧಾನ ಪರಿಷತ್‌ನಿಂದ ನನ್ನನ್ನು ಆಯ್ಕೆ ಮಾಡಿರಬಹುದು. ಕಾರ್ಯಕರ್ತರ ಅಭಿಪ್ರಾಯ, ಇಲ್ಲಿನ ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಒಟ್ಟಾಗಿ ಒಂದಾಗಿ ಹೋಗುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News