ರಂಗಕರ್ಮಿ, ಶಿಕ್ಷಣ ತಜ್ಞ ಪಿ.ವಾಸುದೇವ ರಾವ್ ನಿಧನ

Update: 2019-08-22 15:20 GMT

ಉಡುಪಿ, ಆ.22: ಜಿಲ್ಲೆಯ ಖ್ಯಾತನಾಮ ರಂಗಕರ್ಮಿ, ಸಂಘಟಕ, ಸಾಹಿತಿ, ನಿರ್ದೇಶಕ ಪಿ.ವಾಸುದೇವ ರಾವ್ ಅವರು ಗುರುವಾರ ಕರಂಬಳ್ಳಿಯ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 77 ವರ್ಷ ಪ್ರಾಯವಾಗಿತ್ತು.

ಪಡುಕುದ್ರು ಶ್ರೀನಿವಾಸ ರಾವ್ ಮತ್ತು ಪದ್ಮಾವತಿ ದಂಪತಿಗಳ ಪುತ್ರನಾಗಿ 1942ರಲ್ಲಿ ತಾಲೂಕಿನ ಪಡುತೋನ್ಸೆ ಗ್ರಾಮದ ಪಡುಕುದ್ರುವಿನಲ್ಲಿ ಜನಿಸಿದ ಪಿ.ವಾಸುದೇವ ರಾವ್ ಸ್ನಾತಕೋತ್ತರ ಪದವೀಧರರು. ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಲ್ಲಿ 48 ವರ್ಷಸೇವೆ ಸಲ್ಲಿಸಿದ್ದು, ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿದ್ದರು. ನಂತರ ಉಡುಪಿಯ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದ್ದಾರೆ.

ರಾಜ್ಯದ ಹಿರಿಯ ಹವ್ಯಾಸಿ ನಾಟಕ ಸಂಸ್ಥೆ ಉಡುಪಿಯ ‘ರಂಗಭೂಮಿ’ ಸದಸ್ಯರಾಗಿ, ಜೊತೆ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಇದೀಗ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸೇವೆ ಸಲ್ಲಿಸಿದ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಹಲವು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಇವರ ನಿರ್ದೇಶನದ ಹಲವು ಕಾರ್ಯಕ್ರಮಗಳು ಪ್ರಸಾರಗೊಂಡಿವೆ.

2007ರಲ್ಲಿ ‘ಇಂಟರ್‌ನ್ಯಾಶನಲ್ ಇಂಟೆಗ್ರಿಟಿ, ಪೀಸ್ ಎಂಡ್ ಫ್ರೆಂಡ್‌ಶಿಪ್ ಸೊಸೈಟಿ’ಯಿಂದ ರಾಜೀವ ಗಾಂಧಿ ಎಕ್ಸಲೆನ್ಸಿ ಗೋಲ್ಡ್ಅವಾರ್ಡ್ ಪಡೆದಿ ದ್ದಾರೆ. 2016ರಲ್ಲಿ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಗಳಿಸಿದ್ದಾರೆ.

‘ಬಾಳ ಬೆಳಕು’, ‘ಭಗವದ್ಗೀತೆ’, ‘ಪರಂಪರಾಗತ’, ‘ಬರಹ ತರಹ’ ಇವರ ಪ್ರಕಟಿತ ಕೃತಿಗಳು. ಅಲ್ಲದೆ ಇವರ ಲೇಖನಗಳು, ಕಲಾ ವಿಮರ್ಶೆಗಳು, ಲಲಿತ ಪ್ರಬಂಧಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪಿ.ವಾಸುದೇವ ರಾಯರ ಅಂತ್ಯಕ್ರಿಯೆ ಶುಕ್ರವಾರ ಅಪರಾಹ್ನ 2 ಗಂಟೆಗೆ ಬೀಡಿನಗುಡ್ಡೆಯಲ್ಲಿ ನಡೆಯಲಿದೆ. ರಂಗಭೂಮಿ ಉಡುಪಿ ಹಾಗೂ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜುರಾಯರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News