ಉಡುಪಿ: ಮಳೆಹಾನಿ, ಅತಿವೃಷ್ಟಿ ಹಾನಿ ಕುರಿತು ಪರಾಮರ್ಶಕ ಸಭೆ

Update: 2019-08-22 15:25 GMT

ಉಡುಪಿ, ಆ.22: ಇತ್ತೀಚೆಗೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಹಾಗೂ ಅತಿವೃಷ್ಠಿಯಿಂದ ಭಾಗಶ: ಹಾನಿಯಾಗಿರುವ ಮನೆಗಳಿಗೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ಆದ ಹಾನಿಯ ಕುರಿತಂತೆ ಸಂಬಂಧಿತ ಅಧಿಕಾರಿ ಗಳು ಮರು ಸರ್ವೆ ನಡೆಸುವಂತೆ ರಾಜ್ಯದ ಸಂಪುಟ ದರ್ಜೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಮಳೆ ಹಾನಿ ಹಾಗೂ ಅತಿವೃಷ್ಠಿಯಿಂದಾಗ ಹಾನಿಯ ಪರಿಶೀಲನೆ ಗಾಗಿ ಕರೆಯಲಾದ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಈ ಬಾರಿಯ ಮಳೆ ಹಾಗೂ ಅತಿವೃಷ್ಟಿಯಿಂದ ವಿವಿಧ ಇಲಾಖೆಗಳಿಗೆ ಒಟ್ಟಾರೆಯಾಗಿ 545 ಕೋಟಿ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಇವುಗಳಲ್ಲಿ ಸಾರ್ವಜನಿಕ ಹಾಗೂ ಸರಕಾರಿ ಆಸ್ತಿ-ಪಾಸ್ತಿಗಳಿಗೆ, ಮನೆ, ಶಾಲೆ, ಅಂಗನವಾಡಿ, ಸೇತುವೆ, ಕಾಲುಸಂಕ, ಮೋರಿ, 5 ಜೀವಹಾನಿ, ಕೃಷಿ ಬೆಳೆ ಹಾಗೂ ಅಪಾರ ಪ್ರಮಾಣದ ತೋಟಗಾರಿಕಾ ಬೆಳೆಗಳ ಹಾನಿ ಸೇರಿವೆ ಎಂದು ಅವರು ನುಡಿದರು.

ಅಧಿಕಾರಿಗಳು ಈಗ ಮಾಡಿರುವ ಅಂದಾಜಿನಂತೆ ಜಿಲ್ಲೆಯಲ್ಲಿ ಕೇವಲ ಮೂರು ಮನೆಗಳು ಮಾತ್ರ ಸಂಪೂರ್ಣ ಹಾನಿಯಾಗಿವೆ ಎಂದು ವರದಿ ನೀಡಿದ್ದಾರೆ. ಇವು ಮೂರು ಉಡುಪಿ-ಬ್ರಹ್ಮಾವರ ತಾಲೂಕಿನಲ್ಲಿದ್ದು, ಇವುಗಳ ಒಟ್ಟು ಅಂದಾಜು ನಷ್ಟವನ್ನು 6.90 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಸಂಪೂರ್ಣ ಹಾನಿಗೊಂಡ ಮನೆಗೆ ಈ ಹಿಂದೆ 95,100ರೂ. ಪರಿಹಾರ ಸಿಗುತಿದ್ದರೆ,ಈ ಮೊತ್ತವನ್ನು ಈಗ ಐದು ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಅಲ್ಲದೇ 6ರಿಂದ 8 ತಿಂಗಳು ಅವರಿಗೆ ಬಾಡಿಗೆ ರೂಪದಲ್ಲಿ ತಿಂಗಳಿಗೆ 5000ರೂ. ನೀಡಲಾಗುವುದು ಎಂದು ಕೋಟ ಹೇಳಿದರು.

611 ಭಾಗಶ: ಹಾನಿ: ಇನ್ನು ಶೇ.75ರಿಂದ 99ರಷ್ಟು ಹಾನಿಯಾದ ಮನೆಗಳು 14 ಇದ್ದು, ಇವುಗಳ ಒಟ್ಟು ನಷ್ಟ 30.06 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಅದೇ ರೀತಿ ಶೇ.25ರಿಂದ ಶೇ.75ರಷ್ಟು ಹಾನಿಯಾದ 57 ಮನೆಗಳು ಜಿಲ್ಲೆಯ ಮೂರು ತಾಲೂಕುಗಳಲ್ಲಿದ್ದು, ಇವುಗಳಿಗಾದ ಅಂದಾಜು ಹಾನಿ 43.31 ಲಕ್ಷ ರೂ.ಗಳೆಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ಉಡುಪಿಯಲ್ಲಿ 322, ಕುಂದಾಪುರದಲ್ಲಿ 193, ಕಾರ್ಕಳದಲ್ಲಿ 96 ಸೇರಿ ಒಟ್ಟು 611 ಮನೆಗಳು ಶೇ.15ರಿಂದ 25ರಷ್ಟು ಭಾಗಶ: ಹಾನಿಗೊಳಗಾದ ವರದಿಯನ್ನು ಅಧಿಕಾರಿಗಳು ತಯಾರಿಸಿದ್ದು, ಇದರ ನಷ್ಟ 1.22 ಕೋಟಿ ರೂ.ಗಳೆಂದು ಹೇಳಲಾಗಿದೆ. ಇವುಗಳಲ್ಲಿ ಈಗಾಗಲೇ 25.53 ಲಕ್ಷ ರೂ. ಪರಿಹಾರ ಹಂಚಲಾಗಿದೆ ಎಂದು ವರದಿ ತಿಳಿಸಿದೆ.

ಭಾಗಶ: ಹಾನಿಯಾದ ಮನೆಗಳಲ್ಲೂ ಸಾಕಷ್ಟು ಮನೆಗಳ ಗೋಡೆ ಬಿರುಕು ಬಿಟ್ಟು, ಛಾವಣಿ ಹಾರಿಹೋಗಿ ಬಳಕೆಗೆ ಸಾದ್ಯವಿಲ್ಲದಂತಾಗಿದೆ. ಇಂಥ ಮನೆಗಳನ್ನು ಮರು ಸರ್ವೆಯಲ್ಲಿ ಗುರುತಿಸಿ ಅವುಗಳನ್ನು ಸಂಪೂರ್ಣ ಹಾನಿಯ ವಿಭಾಗಕ್ಕೆ ಸೇರಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹಾನಿಗೊಂಡ ಮರಗಳ ಲೆಕ್ಕ: ಹಾಗೆಯೇ ತೋಟಗಾರಿಕಾ ಬೆಳೆ ಹಾನಿಯಲ್ಲೂ ಈಗ ಹೆಕ್ಟೇರ್ ಹಾನಿಗೆ 18,000ರೂ. ಪರಿಹಾರ ನಿಗದಿ ಯಾಗಿದೆ. ಇದು ಕಷ್ಟಪಟ್ಟು ದುಡಿದ ರೈತರಿಗೆ ಖಂಡಿತ ಸ್ವೀಕಾರಾರ್ಹವಲ್ಲ. ಭೂಸ್ವಾಧೀನ ಸಂದರ್ಭದಲ್ಲಿ ಮರಗಳ ಲೆಕ್ಕ ಹಿಡಿಯುವಂತೆ ಇಲ್ಲೂ ತೋಟದಲ್ಲಿ ಹಾನಿಗೊಳಗಾದ ಹಾನಿಗೊಳಗಾದ ಅಡಿಕೆ, ತೆಂಗು, ಮಾವು, ಕಾಳು ಮೆಣಸು ಹಾಗೂ ಇತರ ಮರ ಗಿಡಗಳ ಸಂಖ್ಯೆಯನ್ನು ಪರಿಗಣಿಸುವಂತೆ ಅವರು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ, ಮರು ಸರ್ವೆ ನಡೆಸಿ ವಿವರವಾದ ವರದಿಯನ್ನು ರಾಜ್ಯ ಸರಕಾರಕ್ಕೆ ನೀಡುವಂತೆ ತಿಳಿಸಿದರು.

ಜಿಲ್ಲೆಯ ವಿಎ, ತಹಶೀಲ್ದಾರ್ ಹಾಗೂ ಇತರ ಕಂದಾಯ ಅಧಿಕಾರಿ ಗಳೊಂದಿಗೆ ಸರ್ವೆ ನಡೆಸುವಂತೆ ಅವರು ತೋಟಗಾರಿಕಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಾದ ಐದು ಜೀವಹಾನಿಗೊಳಗಾದ (ಕುಳಂಜೆ, ಹಕ್ಲಾಡಿ, ನಂದನವನ, ಚೇರ್ಕಾಡಿ, ಕಾಂತಾವರ) ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳನ್ನು ಈಗಾಗಲೇ ನೀಡಲಾಗಿದೆ. ಬಾಕಿ ಇರುವ ಇನ್ನೊಂದು ಲಕ್ಷ ರೂ.ಪರಿಹಾರವನ್ನು ಕೂಡಲೇ ವಿತರಿಸುವಂತೆ ತಿಳಿಸಿದರು.

ಎರಡು ಶಾಲೆ ನೆಲಸಮ: ಮಳೆ-ಗಾಳಿಯಿಂದ ಜಿಲ್ಲೆಯ ಎರಡು ಶಾಲೆಗಳು ಸಂಪೂರ್ಣ (ಕಿರಿಮಂಜೇಶ್ವರ, ನಂದನವನ) ನೆಲಸಮವಾಗಿವೆ. ಇವುಗಳಿಗಾದ ನಷ್ಟ 24 ಲಕ್ಷ ರೂ.ಎಂದು ಅಂದಾಜಿಲಾಗಿದೆ. ಅಲ್ಲದೇ 112 ಶಾಲೆಗಳು, 70 ಅಂಗನವಾಡಿಗಳು ಭಾಗಶ: ಹಾನಿಗೊಳಗಾಗಿವೆ. ಇವುಗಳ ನಷ್ಟ 4.20 ಕೋಟಿ ರೂ. ಎಂದು ಡಿಡಿಪಿಐ ಶೇಷಶಯನ ತಿಳಿಸಿದರು.

ಜಿಲ್ಲೆಯಲ್ಲಿ ಒಂದು ನೀರಿನ ಟ್ಯಾಂಕ್ ಸಂಪೂರ್ಣ ಕುಸಿದಿದೆ. ಅದರ ವಿಲೇವಾರಿಗೆ ಕ್ರಮಕೈಗೊಳ್ಳಬೇಕಾಗಿದೆ. ಅಲ್ಲದೇ 42 ಸೇತುವೆ, ಕಾಲುಸಂಕ, ಮೋರಿಗಳು ಹಾನಿಗೊಂಡಿವೆ. ವಿವಿಧ ರಸ್ತೆಗಳಿಗೆ ಅಪಾರ ಹಾನಿಯಾಗಿದೆ ಎಂದು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ತಿಳಿಸಿದರು.

ಜಿಲ್ಲೆಯ ಅಧಿಕಾರಿ ವರ್ಗ ಜಾಗೃತರಾಗಿದ್ದು, ಪ್ರಾಕೃತಿಕ ವಿಕೋಪ ಪ್ರಕರಣಗಳ ಕುರಿತು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುವಂತೆ ತಿಳಿಸಲಾಗಿದೆ. ಪರಿಹಾರ ಕಾರ್ಯಕ್ಕೆ ಹಣಕಾಸಿನ ಸಮಸ್ಯೆ ಇಲ್ಲ. ಪ್ರಾಕೃತಿಕ ವಿಕೋಪದಡಿಯಲ್ಲಿ ಇರುವ ನಿಧಿಯನ್ನು ಅಗತ್ಯ ಸಂದರ್ಭದಲ್ಲಿ ಬಳಸಲು ಅವರು ಜಿಲ್ಲಾಧಿಕಾರಿಗೆ ಹೇಳಿದರು.

ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ, ಉಡುಪಿ ಜಿಲ್ಲೆಯಲ್ಲಿ ಹಾನಿಯ ಪ್ರಮಾಣ, ಅಗಾಧತೆ ಕಡಿಮೆ ಇದೆ. ಆದರೂ ಜಿಲ್ಲಾಡಳಿತ ಜಾಗೃತರಾಗಿ ಇರುವ ಸೂಚಿಸಿದ ಅವರು, ದಿನದ 24 ಗಂಟೆಯೂ ಅದು ಸವಾಲು ಎದುರಿಸಲು ಸಿದ್ಧವಾಗಿರಬೇಕು ಎಂದರು.

ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷ ಶೀಲಾ ಕೆ.ಶೆಟ್ಟಿ, ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಜಿಲ್ಲಾಧಿಕಾರಿ ಜಿ.ಜಗದೀಶ್, ಎಡಿಸಿ ವಿದ್ಯಾಕುಮಾರಿ, ಎಸ್ಪಿ ನಿಶಾ ಜೇಮ್ಸ್ ಮುಂತಾದವರು ಉಪಸ್ಥಿತರಿದ್ದರು.

ಸಮುದ್ರಕೊರೆತದಿಂದ 20.65ಕೋಟಿ ರೂ.ನಷ್ಟ

ಜಿಲ್ಲೆಯಲ್ಲಿ ಈ ಬಾರಿ 1851 ಮೀ. ಉದ್ದದ ಸಮುದ್ರ ಕೊರೆತ ಕಾಣಿಸಿಕೊಂಡಿದ್ದು, ಇದರಿಂದ 20.65 ಕೋಟಿ ರೂ.ನಷ್ಟದ ಅಂದಾಜು ಮಾಡಲಾಗಿದೆ ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ ಹೇಳಿದೆ.

ಮೆಸ್ಕಾಂನ 3147 ಕಂಬಗಳು ಉರುಳಿದ್ದು, 368 ಪರಿವರ್ತಕಗಳು ಹಾಗೂ 81.81 ಕಿ.ಮೀ. ಮಾರ್ಗ ಹಾನಿಗೊಂಡಿದೆ. ಇದರಿಂದ ಒಟ್ಟು 5.34 ಕೋಟಿ ರೂ.ಗಳ ಸೊತ್ತು ಹಾನಿಗೊಳಗಾಗಿವೆ ಎಂದು ಅದು ತಿಳಿಸಿದೆ.

ಮಳೆ ಬಂದು ಹಾನಿಯಾದರೂ ಶೇ.4 ಕೊರತೆ

ಈ ಬಾರಿ ಮಾರ್ಚ್‌ನಿಂದ ಜುಲೈ ಮಧ್ಯದವರೆಗೆ ಕೈಕೊಟ್ಟು ಕುಡಿಯುವ ನೀರಿಗಾಗಿ ಜಿಲ್ಲೆ ಪರದಾಡುವಂತೆ ಮಾಡಿದ ಮಳೆ ಅನಂತರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸತತವಾಗಿ ಧಾರಾಕಾರವಾಗಿ ಸುರಿದು ಅಪಾರ ಮಳೆಹಾನಿ- ಅತಿವೃಷ್ಟಿ ಉಂಟು ಮಾಡಿದರೆ, ಈ ವರ್ಷ ಒಟ್ಟಾರೆ ಯಾಗಿ ಜಿಲ್ಲೆಯಲ್ಲಿ ಶೇ.4ರಷ್ಟು ಮಳೆಯ ಕೊರತೆ ಕಾಣಿಸಿಕೊಂಡಿದೆ.

ಹವಾಮಾನ ಇಲಾಖೆಯ ಮಾಹಿತಿಯಂತೆ ಇದೇ ಆ.21ರವರೆಗೆ ಜೂ.ನಿಂದ ಆ.21ರವರೆಗೆ ಕುಂದಾಪುರ ತಾಲೂಕಿನಲ್ಲಿ ಶೇ.6ರಷ್ಟು ಅದಿಕ ಮಳೆ ಬಿದ್ದಿದ್ದರೆ, ಉಡುಪಿ ತಾಲೂಕಿನಲ್ಲಿ ಶೇ.-5 ಹಾಗೂ ಕಾರ್ಕಳ ತಾಲೂಕಿನಲ್ಲಿ ಶೇ.-13ರಷ್ಟು ಮಳೆ ಕಡಿಮೆ ಬಿದ್ದಿದೆ.

ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ 1.8ಮಿ.ಮೀ ಕೊರತೆ ಕಂಡುಬಂದಿದ್ದರೆ, ಎಪ್ರಿಲ್‌ನಲ್ಲಿ -12.1, ಮೇನಲ್ಲಿ -158.5ಮಿ.ಮೀ., ಜೂನ್‌ನಲ್ಲಿ -483 ಮಿ.ಮೀ (ಶೇ.44 ಕೊರತೆ), ಜುಲೈನಲ್ಲಿ -20ಮಿ.ಮೀ.(-1) ಹಾಗೂ ಆಗಸ್ಟ್‌ನಲ್ಲಿ 385.7ಮಿ.ಮೀ. (+46) ಮಳೆ ಅಧಿಕ ಸುರಿದಿದೆ. ಒಟ್ಟಾರೆ ಯಾಗಿ ಈ ಅವಧಿಯಲ್ಲಿ ಜಿಲ್ಲೆಯ ಒಟ್ಟಾರೆ ಮಳೆ ಪ್ರಮಾಣ 3616.6ಮಿ.ಮೀ ಆಗಿದ್ದು, 3316.9 (-299.7) ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News