ಭಾರೀ ಮಳೆಯಿಂದ ದ.ಕ. ಜಿಲ್ಲೆಯಲ್ಲಿ ಸುಮಾರು 750 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2019-08-22 15:48 GMT

ಮಂಗಳೂರು, ಆ.22: ಭಾರೀ ಮಳೆಯಿಂದಾಗಿ ದ.ಕ. ಜಿಲ್ಲೆಯ ವಿವಿಧ ಕಡೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಸುಮಾರು 750 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಇದು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಪ್ರವಾಹ ಮತ್ತು ಪ್ರಾಕೃತಿಕ ವಿಕೋಪದ ಕುರಿತಾಗಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ನೆರೆ ಮತ್ತು ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಈಗಾಗಲೇ 15 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಅವರು ಈ ಸಂದರ್ಭ ಸ್ಪಷ್ಟಪಡಿಸಿದರು.

ಪೂರ್ಣ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕಾಗಿ ತಲಾ 5 ಲಕ್ಷ ರೂ. ಹೆಚ್ಚಿನ ರಿಪೇರಿ ಇರುವ ಮನೆಗಳಿಗೆ ತಲಾ ಒಂದು ಲಕ್ಷ ರೂ ಮತ್ತು ಸಣ್ಣಪುಟ್ಟ ರಿಪೇರಿಗೆ ತಲಾ 25,000 ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮನೆ ನಿರ್ಮಾಣದ ಅವಧಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುವ ಸಂತ್ರಸ್ತ ಕುಟುಂಬಗಳಿಗೆ ಮಾಸಿಕ ರೂ.5,000 ನೆರವು ನೀಡಲಾಗುವುದು ಎಂದು ಸಚಿವರು ಹೇಳಿದರು.

ಎಲ್ಲವನ್ನು ಕಳೆದುಕೊಂಡು ಬೇರೆ ನೆಲೆ ಇಲ್ಲ ಎಂಬ ದೀನ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ಜಿಲ್ಲಾಡಳಿತವೇ 50,000 ರೂ. ವೆಚ್ಚದಲ್ಲಿ ಶೆಡ್ ನಿರ್ಮಿಸಿ ಕೊಡಲಿದೆ. ತುರ್ತು ಪರಿಹಾರವಾಗಿ ಸಂತ್ರಸ್ತ ಕುಟುಂಬಗಳಿಗೆ 10,000 ರೂ. ಪರಿಹಾರವನ್ನು ನೀಡುವ ಕಾರ್ಯವನ್ನು ಜಿಲ್ಲಾಡಳಿತ ಈಗಾಗಲೇ ಪೂರ್ಣಗೊಳಿಸಿದೆ. 191 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಮನೆಗಳ ದುರಸ್ಥಿಗಾಗಿ ಒಂದು ಲಕ್ಷ ರೂ. ಪರಿಹಾರ ಯೋಜನೆ ಯನ್ನು ನಾಳೆಯಿಂದ ಜಾರಿಗೊಳಿಸಿ ವಿತರಿಸಲಾಗುವುದು ಎಂದು ಅವರು ವಿವರಿಸಿದರು.

ಪಚ್ಚನಾಡಿಯ ಮಂದಾರ ಉಳ್ಳಾಲ, ಬೆಳ್ತಂಗಡಿಯ ಮಿತ್ತಬಾಗಿಲಿನ ಗಣೇಶನಗರ, ಮಕ್ಕಿ ಪ್ರದೇಶದ 105 ಕುಟುಂಬಗಳನ್ನು ಖಾಯಂ ಸ್ಥಳಾಂತರ ಮಾಡುವ ಅನಿರ್ವಾಯತೆ ಇದೆ. ಈ ಸಂಖ್ಯೆ 200ರ ಗಡಿ ದಾಟುವ ಸಾಧ್ಯತೆ ಇದೆ. ಸ್ಥಳಾಂತರಿಸಲಾಗುವ ಕುಟುಂಬಗಳಿಗೆ ವಿಶೇಷ ಪ್ಯಾಕೇಜಿನ ಮೂಲಕ ತಲಾ ರೂ. 5 ಲಕ್ಷ ವೆಚ್ಚದ ಮನೆ ನಿರ್ಮಾಣ ಮಾಡಿ ಕೊಡಲಾಗುವುದು. ಜಿಲ್ಲಾಧಿಕಾರಿಗಳು ಸಲ್ಲಿಸುವ ವರದಿಯ ಆಧಾರದಲ್ಲಿ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.

ಮಂಗಳೂರು ಮಹಾ ನಗರಪಾಲಿಕೆಯ ಪಚ್ಚನಾಡಿ ಪ್ರದೇಶದಲ್ಲಿ ತ್ಯಾಜ್ಯ ಘಟಕಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ತಜ್ಞರ ತಂಡವೊಂದರಿಂದ ಅಧ್ಯಯನ ವರದಿ ಸಿದ್ಧ ಪಡಿಸಿ ಸರಕಾರದ ಮುಂದೆ ಮಂಡಿಸಲಾಗುವದು. ವಿಶೇಷ ಪ್ಯಾಕೇಜ್‌ಗಾಗಿ ಮುಖ್ಯಮಂತ್ರಿಯನ್ನು ವಿನಂತಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News