ದ.ಕ. ಜಿಲ್ಲೆಯ 944 ಮನೆಗಳಿಗೆ ಹಾನಿ: 415.918 ಲಕ್ಷ ರೂ. ಪರಿಹಾರ ಬೇಡಿಕೆ

Update: 2019-08-22 15:43 GMT

ಮಂಗಳೂರು, ಆ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, ನೆರೆ ಹಾಗೂ ಪ್ರವಾಹದಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಈವರೆಗೆ 944 ಮನೆಗಳಿಗೆ ಹಾನಿಯಾಗಿದ್ದು, 1148.530 ಲಕ್ಷ ರೂ. ನಷ್ಟ ಸಂಭವಿಸಿದ್ದು, 415.918 ಲಕ್ಷ ರೂ. ಪರಿಹಾರಕ್ಕಾಗಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ನಷ್ಟಗಳ ಕುರಿತಂತೆ ನಡೆದ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಂಕಿ ಅಂಶಗಳೊಂದಿಗೆ ಹಾನಿ ಹಾಗೂ ನಷ್ಟದ ವಿವರ ನೀಡಿದರು.

ಇವುಗಳಲ್ಲಿ 66 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 90 ಮನೆಗಳು ಶೇ. 75ರಿಂದ ಶೇ. 99ರವರೆಗೆ ನಾಶವಾಗಿದೆ. ಶೇ. 25ರಿಂದ 75ರಷ್ಟು 225 ಮನೆಗಳಿಗೆ ಹಾನಿಯಾಗಿದ್ದು, ಶೇ. 15ರಿಂದ ಶೇ. 25ರವರೆಗೆ 485 ಮನೆಗಳಿಗೆ ಹಾನಿಯಾಗಿವೆ. ಈಗಾಗಲೇ ಹಾನಿಗೊಳಗಾಗಿ ಸಂತ್ರಸ್ತರಾದವರಿಗೆ ಮುಖ್ಯಮಂತ್ರಿಯವರು ಘೋಷಿಸಿರುವಂತೆ ತಲಾ 10,000 ರೂ.ಗಳಂತೆ ತುರ್ತು ಪರಿಹಾರವನ್ನು ಒದಗಿಸಲಾಗಿದೆ ಎಂದು ಜಿಲಾ್ಲಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಇದೇ ವೇಳೆ 1415.13 ಕಿ.ಮೀ.ಗಳ ರಸ್ತೆ ಹಾನಿಗೊಳಗಾಗಿದ್ದು, 67287.1 ಲಕ್ಷ ರೂ. ಹಾನಿ ಸಂಭವಿಸಿದೆ. 424 ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, 357.6 ಹೆಕ್ಟೇರ್ ಭೂಮಿ ಕೃಷಿ ನಾಶವಾಗಿದೆ. ಪ್ರಾಕೃತಿಕ ವಿಕೋಪಕ್ಕೆ 2 ಜೀವಹಾನಿ ಸಂಭವಿಸಿದ್ದರೆ, 12 ದನ ಕರುಗಳು ಸಾವಿಗೀಡಾಗಿವೆ. ಮೃತ ಪಟ್ಟ ಇಬ್ಬರಿಗೆ ತಲಾ 5 ಲಕ್ಷ ರೂ.ನಂತೆ ಪರಿಹಾರವನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ಗಿಡಗಳ ಲೆಕ್ಕಾಚಾರದಲ್ಲಿ ಬೆಳೆ ಪರಿಹಾರ ಅಂದಾಜಿಗೆ ಸಚಿವ ಸಲಹೆ

ಕೃಷಿ, ಬೆಳೆ ನಾಶಕ್ಕೆ ಸಂಬಂಧಿಸಿ ಎಕರೆವಾರು ನಷ್ಟಕ್ಕೆ ಪರಿಹಾರವನ್ನು ಅಂದಾಜಿಸುವ ಬದಲಿಗೆ ಆ ಪ್ರದೇಶದಲ್ಲಿದ್ದ ತೆಂಗು, ಅಡಿಕೆ ಸೇರಿದಂತೆ ವಾಣಿಜ್ಯ ಬೆಳೆಗಳ ಗಿಡಗಳನ್ನು ಲೆಕ್ಕಾಚಾರ ಹಾಕಿ ಅಂದಾಜು ಪಟ್ಟಿ ತಯಾರಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆಯಲ್ಲಿ ಸಲಹೆ ನೀಡಿದರು.

ಬೆಳೆ ನಾಶಕ್ಕೆ ಸಂಬಂಧಿಸಿ ಎಕರೆಯೊಂದಕ್ಕೆ 18,000 ರೂ. ಪರಿಹಾರ ನೀಡಲಾಗುತ್ತದೆ. ಇದರಿಂದ ಸೂಕ್ತ ಪರಿಹಾರ ದೊರಕಿದಂತಾಗುವುದಿಲ್ಲ. ಹಾಗಾಗಿ ತೆಂಗು, ಅಡಿಕೆಯ ವಯಸ್ಸಿನ ಆಧಾರದಲ್ಲಿ ಪರಿಹಾರ ನಿಗದಿಪಡಿಸಬೇಕು ಎಂದು ಸಭೆಯಲ್ಲಿದ್ದ ಶಾಸಕ ರಾಜೇಶ್ ನಾಯ್ಕಿ ವಿನಂತಿಸಿದ ಮೇೆಗೆ, ಸಚಿವರು ಈ ಸಲಹೆ ನೀಡಿದರು.

10 ಬೋಟ್‌ಗಳ ಬಳಕೆ

ಮಳೆಯಿಂದಾಗಿ ಪ್ರವಾಹ, ನೆರೆಯಿಂದ ಸಂಪರ್ಕವನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ 1900 ಮಂದಿಯನ್ನು ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸರು, ಮೀನುಗಾರರು, ಸಾರ್ವನಿಕರ ನೆರವಿನಲ್ಲಿ ರಕ್ಷಣೆ ಮಾಡಲಾಗಿದೆ. ಕಳೆದ ವರ್ಷ ಸಂಭವಿಸಿದ ಮಳೆಯ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ 10 ಬೋಟ್‌ಗಲನ್ನು ಖರೀದಿಸಿ ಸಿದ್ಧವಿರಿಸಿದ್ದ ಪರಿಣಾಮ ಜಿಲ್ಲೆಗೆ ಯಾವುದೇ ರೀತಿಯಲ್ಲಿ ಕೆಟ್ಟ ಹೆಸರು ಬಾರದಂತೆ ಜಿಲ್ಲಾಡಳಿತ ರಕ್ಷಣಾ ಕಾರ್ಯ ನಡೆಸಲು ಸಾಧ್ಯವಾಯಿತು. ಜಿಲ್ಲೆಯಲ್ಲಿ ಒಟ್ಟು 31 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅವುಗಳಲ್ಲಿ ಸದ್ಯ 2 ತೆರೆದಿವೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

105 ಮನೆಗಳು ಅಪಾಯದಲ್ಲಿ

ಭಾರೀ ಮಳೆಯಿಂದಾಗಿ ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯ ಪ್ರವಾಹದೊಂದಿಗೆ ಹರಿದು ಮಂದಾರ ಪ್ರದೇಶದ 27 ಮನೆಗಳು ವಾಸಿಸಲು ಅಯೋಗ್ಯವಾಗಿವೆ. ಅದೇ ರೀತಿಯಲ್ಲಿ ಉಳ್ಳಾಲದಲ್ಲಿ ಕಡಲ್ಕೊರೆತದಿಂದಾಗಿ 45 ಮನೆಗಳು ಅಪಾಯದಲ್ಲಿದ್ದರೆ, ಬೆಳ್ತಂಗಡಿಯ ಗಣೇಶ್ ನಗರದ 16 ಮನೆಗಳು, ಮಕ್ಕಿಯ 17 ಮನೆಗಳು ಕೂಡಾ ವಾಸಿಸಲು ಯೋಗ್ಯವಾಗಿಲ್ಲ ಎಂಬ ಬಗ್ಗೆ ಭೂ ವಿಜ್ಞಾನ ಇಲಾಖೆಯ ತಜ್ಞರು ವರದಿ ನೀಡಿದ್ದಾರೆ. ಇನ್ನೂ ಹಲವಾರು ಮನೆಗಳು ಅಪಾಯದಂಚಿನಲ್ಲಿವೆ. ಬಂಟ್ವಾಳದ ಕೈರಂಗಳ, ಪುತ್ತೂರಿನ ತೆಂಕಿಲದಲ್ಲಿಯೂ ಕೆಲವು ಮನೆಗಳು ಅಪಾಯದಲ್ಲಿವೆ. ಅಂತಹವರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಶಾಶ್ವತ ಪರಿಹಾರವನ್ನು ಒದಗಿಸಬೇಕಾಗಿದೆ. ಸರಕಾರ ಈ ಬಗ್ಗೆ ವಿಶೇಷ ಪ್ಯಾಕೇಜ್ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.

ಈ ಬಗ್ಗೆ ಸಮಗ್ರ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವಂತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಭೆಯಲ್ಲಿದ್ದ ಆರೋಗ್ಯಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಿದ ನಷ್ಟ ಹಾಗೂ ಹಾನಿಯ ಕುರಿತು ವಿವರ ನೀಡಿದರು.

ಉಸ್ತುವಾರಿ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್, ಶಾಸಕ ರಾಜೇಶ್ ನಾಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾ. ಆರ್. ಸೆಲ್ವಮಣಿ, ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಪಿ.ಎಸ್.,ಮೆಸ್ಕಾಂ ಎಂಡಿ ಸ್ನೇಹಾಲ್ ಆರ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News