ಸಿಬಿಐ ಚಿದಂಬರಂ ಮನೆ ಆವರಣಗೋಡೆ ಏರಿರುವುದು ಭಾರತಕ್ಕೆ ಮಾಡಿದ ಅವಮಾನ: ಸ್ಟಾಲಿನ್

Update: 2019-08-22 17:49 GMT

ಚೆನ್ನೈ,ಆ.22: ಸಿಬಿಐ ಅಧಿಕಾರಿಗಳು ಬುಧವಾರ ಕಾಂಗ್ರೆಸ್ ನಾಯಕ ಪಿ.ಚಿದಂಬರಮ್ ಅವರ ದಿಲ್ಲಿಯಲ್ಲಿರುವ ಬಂಗಲೆಯನ್ನು ಪ್ರವೇಶಿಸಲು ಅದರ ಆವರಣಗೋಡೆಯನ್ನು ಏರಿರುವುದನ್ನು ನಾನು ಭಾರತಕ್ಕೆ ಮಾಡಿದ ಅವಮಾನ ಎಂದು ಭಾವಿಸುತ್ತೇನೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಗುರುವಾರ ತಿಳಿಸಿದ್ದಾರೆ. ಮಾಜಿ ಕೇಂದ್ರ ಸಚಿವರ ಬಂಧನದ ಹಿಂದೆ ರಾಜಕೀಯ ಪ್ರತೀಕಾರ ಅಡಗಿದೆ ಎಂಬ ಆರೋಪವನ್ನು ಸ್ಟಾಲಿನ್ ಪುನರುಚ್ಛರಿಸಿದ್ದಾರೆ. ಡಿಎಂಕೆ ಕಾಂಗ್ರೆಸ್‌ನ ಮಿತ್ರಪಕ್ಷವಾಗಿದೆ. ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ನಿವಾಸದ ಆವರಣಗೋಡೆಯನ್ನು ಏರುವುದನ್ನು ನಾನು ಟಿವಿಯಲ್ಲಿ ವೀಕ್ಷಿಸಿದೆ. ಈ ಕ್ರಮವನ್ನು ನಾನು ಭಾರತಕ್ಕೆ ಮಾಡಿದ ಅವಮಾನ ಎಂದು ಭಾವಿಸುತ್ತೇನೆ ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.

ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಮನವಿಯನ್ನು ತಳ್ಳಿ ಹಾಕಿರುವ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವ ಕುರಿತು ಶುಕ್ರವಾರ ನಿರ್ಧಾರ ತೆಗೆದುಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿದ್ದರೂ ಅವರನ್ನು ಅವಸರದಲ್ಲಿ ಬಂಧಿಸಿರುವುದು ಈ ಪ್ರಕರಣದಲ್ಲಿ ರಾಜಕೀಯ ಪ್ರತೀಕಾರದ ಉದ್ದೇಶವಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಚಿದಂಬರಮ್ ಬಂಧನ ಪ್ರಕ್ರಿಯೆ ಸರಿಯಿಲ್ಲ: ಮಮತಾ ಬ್ಯಾನರ್ಜಿ

ಕಾಂಗ್ರೆಸ್ ನಾಯಕ ಪಿ.ಚಿದಂಬರಮ್ ಅವರನ್ನು ಸಿಬಿಐ ಬಂಧಿಸಿರುವ ರೀತಿಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ಈ ವಿಷಯವನ್ನು ನಿಬಾಯಿಸಿರುವ ರೀತಿ ಬಹಳ ಹತಾಶೆ ಮೂಡಿಸುತ್ತದೆ ಮತ್ತು ಅದು ಅತ್ಯಂತ ದುಃಖದ ಮತ್ತು ಕೆಟ್ಟದ್ದಾಗಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಕೆಲವೊಮ್ಮೆ ಪ್ರಕ್ರಿಯೆ ತಪ್ಪಾಗಿರುತ್ತದೆ. ನಾನು ಈ ವಿಷಯದ ಕಾನೂನಾತ್ಮಕತೆ ಬಗ್ಗೆ ಚರ್ಚಿಸುವುದಿಲ್ಲ. ಆದರೆ ಚಿದಂಬರಂ ಓರ್ವ ಹಿರಿಯ ರಾಜಕಾರಣಿ ಮತ್ತು ದೇಶದ ಗೃಹ ಸಚಿವರಾಗಿದ್ದವರು ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News