ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆ ಮೇಲಿನ ನಿರ್ಬಂಧ ತೆಗೆಯುವಂತೆ ವಿಶ್ವಸಂಸ್ಥೆ ಮನವಿ

Update: 2019-08-22 17:08 GMT

ಲಂಡನ್/ಶ್ರೀನಗರ, ಆ.22: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆ ಮತ್ತು ಶಾಂತಿಯುತ ಪ್ರತಿಭಟನೆ ಮೇಲೆ ಹೇರಲಾಗಿರುವ ನಿರ್ಬಂಧವನ್ನು ತೆಗೆದು ಹಾಕುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಭಾರತಕ್ಕೆ ಮನವಿ ಮಾಡಿದೆ. ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಯಲ್ಲಿ ಎತ್ತುವುದಾಗಿ ಪಾಕಿಸ್ತಾನ ತಿಳಿಸಿದ ಮರುದಿನವೇ ಈ ಹೇಳಿಕೆ ಹೊರಬಿದ್ದಿದೆ. ಆಗಸ್ಟ್ 5ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆಯ ಮೇಲೆ ನಿರ್ಬಂಧ ಹೇರಲಾಗಿದೆ. ಕಣಿವೆ ರಾಜ್ಯದ ಅನೇಕ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ ಮತ್ತು ಹೊಸದಿಲ್ಲಿಯ ರಾಜಕಾರಣಿಗಳೂ ಈ ಪ್ರದೇಶಕ್ಕೆ ಪರಿಶೀಲನೆಗೆ ತೆರಳದಂತೆ ತಡೆಯಲಾಗುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ವಿಶ್ವಸಂಸ್ಥೆಯ ಹಕ್ಕುಗಳ ತಜ್ಞರು, ರಾಜ್ಯದಲ್ಲಿ ಹೇರಲಾಗಿರುವ ನಿರ್ಬಂಧಗಳಿಂದ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಅಂತರ್ಜಾಲ ಮತ್ತು ದೂರಸಂಪರ್ಕ ವ್ಯವಸ್ಥೆಯನ್ನು ಸರಕಾರ ಯಾವುದೇ ಸಮರ್ಥನೆ ನೀಡದೆ ಸ್ಥಗಿತಗೊಳಿಸಿರುವುದು ಅಗತ್ಯತೆ ಮತ್ತು ಸಮಾನತೆಯ ಮೂಲಭೂತ ನಿಯಮಗಳಿಗೆ ಸರಿಹೊಂದುವುದಿಲ್ಲ ಎಂದು ತಿಳಿಸಿದೆ. ರಾತ್ರಿಯ ಸಮಯದಲ್ಲಿ ಭದ್ರತಾ ಪಡೆಗಳು ಸ್ಥಳೀಯರ ಮನೆಗಳಿಗೆ ದಾಳಿ ನಡೆಸಿ ಯುವಕರ ಬಂಧನ ನಡೆಸಿರುವುದರ ಬಗ್ಗೆಯೂ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಂಡಳಿ ಇಂತಹ ಬಂಧನಗಳು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗುತ್ತವೆ ಎಂದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News