ವಿಚಾರಣೆಗೆ ಹಾಜರಾದ ರಾಜ್ ಠಾಕ್ರೆ

Update: 2019-08-22 17:07 GMT

ಮುಂಬೈ, ಆ.22: ಆರ್ಥಿಕ ಸೌಲಭ್ಯ ಒದಗಿಸುವ ‘ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸ್’(ಐಎಲ್ ಆ್ಯಂಡ್ ಎಫ್‌ಎಸ್) ಸಂಸ್ಥೆಯಲ್ಲಿ ಎದುರಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿ ಮಹಾರಾಷ್ಟ್ರ ನವನಿರ್ಮಾಣ ಸಮಿತಿ(ಎಂಎನ್‌ಎಸ್)ಯ ಅಧ್ಯಕ್ಷ ರಾಜ್ ಠಾಕ್ರೆ ಜಾರಿ ನಿರ್ದೇಶನಾಲಯದ ಎದುರು ಗುರುವಾರ ವಿಚಾರಣೆಗೆ ಹಾಜರಾದರು.

‘ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವಿಸ್’ ಸಂಸ್ಥೆ ಬಾಗಿಲು ಮುಚ್ಚಿದೆ. ಈ ಸಂಸ್ಥೆಯಿಂದ 450 ಕೋಟಿ ರೂ. ಸಾಲ ಪಡೆದಿರುವ ನಿರ್ಮಾಣ ಸಂಸ್ಥೆ ‘ಕೊಹಿನೂರ್ ಸಿಟಿಎನ್‌ಎಲ್’ ಜತೆ ರಾಜ್ ಠಾಕ್ರೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪವಿದೆ. ರಾಜ್ ಠಾಕ್ರೆ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆಯ ಸೋದರಳಿಯ. ರಾಜ್ ಠಾಕ್ರೆ ಬೆಳಿಗ್ಗೆ ಪತ್ನಿ, ಮಗ ಹಾಗೂ ಸೊಸೆಯೊಂದಿಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದರು. ಪತ್ನಿ, ಪುತ್ರ ಹಾಗೂ ಸೊಸೆಯನ್ನು ಸಮೀಪದ ಹೋಟೆಲೊಂದಕ್ಕೆ ಕಳುಹಿಸಿದ ಬಳಿಕ ರಾಜ್ ಠಾಕ್ರೆಯ ವಿಚಾರಣೆ ಆರಂಭಿಸಲಾಯಿತು. ಈ ಮಧ್ಯೆ, ಎಂಎನ್‌ಎಸ್ ಕಾರ್ಯಕರ್ತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆಯನ್ನು ವ್ಯವಸ್ಥೆ ಮಾಡಲಾಗಿದೆ. ಎಂಎನ್‌ಎಸ್‌ನ ಪ್ರಮುಖ ಮುಖಂಡರಿಗೆ ‘ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್’(ಸಿಸಿಪಿ) ನಡಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಸಿಸಿಪಿಯಡಿ ಯಾವುದೇ ವ್ಯಕ್ತಿಯನ್ನು ವಾರಂಟ್ ಇಲ್ಲದೆಯೇ ಬಂಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News