ಎಂಎಸ್‌ಸಿಬಿ ಹಗರಣ: ಎನ್‌ಸಿಪಿ ನಾಯಕ ಅಜಿತ್ ಪವಾರ್, ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

Update: 2019-08-22 17:42 GMT

 ಮುಂಬೈ,ಆ.22: ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್ (ಎಂಎಸ್‌ಸಿಬಿ) ಹಗರಣ ಪ್ರಕರಣದಲ್ಲಿ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ 70ಕ್ಕೂ ಅಧಿಕ ಜನರ ವಿರುದ್ಧ ಮುಂದಿನ ಐದು ದಿನಗಳಲ್ಲಿ ಎಫ್‌ಐಆರ್ ದಾಖಲಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (ಇಒಡಬ್ಲು)ಕ್ಕೆ ಆದೇಶಿಸಿದೆ. ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ವಿಶ್ವಾಸಾರ್ಹ ಸಾಕ್ಷಗಳಿವೆ ಎಂದು ಅದು ಎತ್ತಿ ಹಿಡಿದಿದೆ.

ಬ್ಯಾಂಕಿನ ನಿರ್ದೇಶಕರಲ್ಲೋರ್ವರಾಗಿದ್ದ ಪವಾರ್ ಜೊತೆಗೆ ಎನ್‌ಸಿಪಿ ನಾಯಕ ಜಯಂತ್ ಪಟೇಲ್ ಮತ್ತು ರಾಜ್ಯದಲ್ಲಿಯ 34 ಜಿಲ್ಲೆಗಳ ಹಿರಿಯ ಸಹಕಾರಿ ಬ್ಯಾಂಕ್ ಅಧಿಕಾರಿಗಳೂ ಆರೋಪಿಗಳಾಗಿದ್ದಾರೆ. ಆರೋಪಿಗಳು 2007-2011ರ ನಡುವೆ ಎಂಎಸ್‌ಸಿಬಿಗೆ 1,000 ಕೋ.ರೂ.ನಷ್ಟವನ್ನುಂಟು ಮಾಡುವಲ್ಲಿ ಶಾಮೀಲಾಗಿದ್ದರು ಎಂದು ಆರೋಪಿಸಲಾಗಿದೆ.

ನಬಾರ್ಡ್‌ನ ತಪಾಸಣಾ ವರದಿ ಮತ್ತು ಮಹಾರಾಷ್ಟ್ರ ಸಹಕಾರಿ ಸಂಘಗಳ ಕಾಯ್ದೆಯಡಿ ನ್ಯಾಯಿಕ ಸ್ವರೂಪದ ವಿಚರಣಾ ಆಯೋಗವು ಸಲ್ಲಿಸಿದ್ದ ಆರೋಪಪಟ್ಟಿ ಪವಾರ್ ಹಾಗೂ ಬ್ಯಾಂಕಿನ ಹಲವಾರು ನಿರ್ದೇಶಕರು ಸೇರಿದಂತೆ ಇತರ ಆರೋಪಿಗಳ ವಿರುದ್ಧ ಬೆಟ್ಟುಮಾಡಿದ್ದವು. ಸಕ್ಕರೆ ಕಾರ್ಖಾನೆಗಳು ಮತ್ತು ಸ್ಪಿನಿಂಗ್ ಮಿಲ್‌ಗಳಿಗೆ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾಲಗಳನ್ನು ವಿತರಿಸಿದ್ದ ಆರೋಪಿಗಳ ನಿರ್ಧಾರಗಳು,ಕ್ರಮಗಳು ಮತ್ತು ಸಾಲ ಮರುವಸೂಲಾತಿಯಲ್ಲಿ ನಿಷ್ಕ್ರಿಯತೆ ಬ್ಯಾಂಕಿನ ನಷ್ಟಕ್ಕೆ ಕಾರಣವಾಗಿದ್ದವು ಎಂದು ಅವು ಸ್ಪಷ್ಟಪಡಿಸಿದ್ದವು. ಇದರ ಹೊರತಾಗಿಯೂ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ಅನ್ನು ದಾಖಲಿಸಿಕೊಂಡಿರಲಿಲ್ಲ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸುರಿಂದರ್ ಅರೋರಾ ಅವರು 2015ರಲ್ಲಿ ಇಒಡಬ್ಲುಗೆ ದೂರು ಸಲ್ಲಿಸಿ,ಬಳಿಕ ಎಫ್‌ಐಆರ್ ದಾಖಲಿಸುವಂತೆ ಕೋರಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News