ಖಾಸಗಿ ಕ್ಷೇತ್ರದ ‘ಸರಕಾರ ರಕ್ಷಿಸಲಿ’ ಮಾನಸಿಕತೆ ಬದಲಾಗಬೇಕು: ಮುಖ್ಯ ಆರ್ಥಿಕ ಸಲಹೆಗಾರ

Update: 2019-08-22 18:35 GMT

ಹೊಸದಿಲ್ಲಿ,ಆ.22: ಆರ್ಥಿಕ ಸಂಕಷ್ಟದ ಸಮಯದಲ್ಲಿ ಖಾಸಗಿ ಕ್ಷೇತ್ರ ನಷ್ಟಗಳನ್ನು ಸಾಮಾಜೀಕರಣಗೊಳಿಸುವುದನ್ನು ನಿಲ್ಲಿಸಬೇಕು ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯನ್ ಸಲಹೆ ನೀಡಿದ್ದಾರೆ.

ಖಾಸಗಿ ಕ್ಷೇತ್ರಗಳು ಆರ್ಥಿಕ ಸಂಕಷ್ಟದ ಸಮಯದಲ್ಲಿ ಲಾಭವನ್ನು ಗಳಿಸಿಯೂ ಸರಕಾರದ ಉಡುಗೊರೆಗಳಿಗೆ ಆಗ್ರಹಿಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿರುವ ಸುಬ್ರಮಣ್ಯನ್, ಖಾಸಗಿ ಕ್ಷೇತ್ರಗಳ ‘ಸರಕಾರ ರಕ್ಷಿಸಲಿ’ ಮಾನಸಿಕತೆ ಬದಲಾಗಬೇಕಿದೆ ಎಂದು ಅಭಿಪ್ರಾಯಿಸಿದ್ದಾರೆ. ಮೂವತ್ತರ ಹರೆಯದ ವ್ಯಕ್ತಿಯೊಬ್ಬ ತನ್ನ ಕಾಲ ಮೇಲೆ ನಿಲ್ಲುವುದನ್ನು ಕಲಿಯಬೇಕು. ಆತ ಪ್ರತಿ ಬಾರಿಯೂ ತನ್ನ ತಂದೆಯ ಸಹಾಯವನ್ನು ನಿರೀಕ್ಷಿಸಬಾರದು ಮತ್ತು ಲಾಭವನ್ನು ವೈಯಕ್ತಿಕಗೊಳಿಸುವ ಹಾಗೂ ನಷ್ಟವನ್ನು ಸಾಮಾಜೀಕರಣಗೊಳಿಸುವ ಪರಿಕಲ್ಪನೆ ಹೊಂದಬಾರದು ಎಂದು ಸುಬ್ರಮಣ್ಯನ್ ತಿಳಿಸಿದ್ದಾರೆ.

ಈ ವೇಳೆ ವಾಹನ ಕ್ಷೇತ್ರದ ಬಗ್ಗೆ ಮಾತನಾಡಿದ ಅವರು, ಆಟೊಮೊಬೈಲ್ ಕಂಪೆನಿಗಳಲ್ಲಿ ಏನು ನಡೆಯುತ್ತಿದೆಯೋ ಅದು ಆರ್ಥಿಕ ಕುಸಿತದ ಲಕ್ಷಣಗಳಲ್ಲ. ಸರಕಾರ ಪ್ರಗತಿಯತ್ತ ದೃಷ್ಟಿ ನೆಟ್ಟಿದೆ ಮತ್ತು ಜಿಡಿಪಿಗೆ ಉತ್ತೇಜನ ನೀಡಲು ಅಗತ್ಯ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಆದರೆ ಖಾಸಗಿ ವಲಯಗಳು ಪ್ರತಿಬಾರಿಯೂ ಆರ್ಥಿಕ ನಿಧಾನಗತಿಯ ಸಮಯದಲ್ಲಿ ಸರಕಾರ ನೆರವಾಗಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News