ಉತ್ತರ ಪ್ರದೇಶದ ಈ ಶಾಲಾ ಮಕ್ಕಳಿಗೆ ಉಪ್ಪು, ರೊಟ್ಟಿಯೇ ಪೌಷ್ಟಿಕ ಆಹಾರ!

Update: 2019-08-23 07:17 GMT

ಮಿರ್ಜಾಪುರ: ಕೇಂದ್ರ ಸರ್ಕಾರದ ಯೋಜನೆಯಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಕೇವಲ ಉಪ್ಪು ಹಾಗೂ ರೊಟ್ಟಿ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ.

ಪೂರ್ವ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ 1 ರಿಂದ 8ನೇ ತರಗತಿವರೆಗೆ ಇರುವ ಸರ್ಕಾರಿ ಶಾಲೆಯ 100ಕ್ಕೂ ಹೆಚ್ಚು ಮಕ್ಕಳಿಗೆ ಕೇವಲ ರೊಟ್ಟಿ ಹಾಗೂ ಉಪ್ಪು ಬಡಿಸಿರುವ ಕುರಿತ ವಿಡಿಯೊ ಬಹಿರಂಗಾಗಿದೆ.

ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಕೇಂದ್ರದ ಯೋಜನೆಯಾಗಿದ್ದು, ಮಿರ್ಜಾಪುರ ಶಾಲೆಯ ಮಕ್ಕಳು ನೆಲದಲ್ಲಿ ಕುಳಿತು ರೊಟ್ಟಿಯನ್ನಷ್ಟೇ ಉಪ್ಪು ಸೇರಿಸಿಕೊಂಡು ತಿನ್ನುತ್ತಿರುವುದು ವಿಡಿಯೊದಲ್ಲಿ ಕಾಣುತ್ತಿದೆ.

ಉತ್ತರ ಪ್ರದೇಶ ಮಧ್ಯಾಹ್ನ ಬಿಸಿಯೂಟ ಪ್ರಾಧಿಕಾರದ ವೆಬ್‍ಸೈಟ್ ಪ್ರಕಾರ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಅನ್ನ, ರೋಟಿ ಹಾಗೂ ತರಕಾರಿ ನೀಡಲಾಗುತ್ತದೆ. ಕೆಲ ದಿನಗಳಲ್ಲಿ ಹಣ್ಣು- ಹಾಲು ಕೂಡಾ ಸೇರಿಸಲಾಗುತ್ತದೆ ಎಂದು ಪಟ್ಟಿಯಲ್ಲಿ ಹೇಳಲಾಗಿದೆ.

"ಇಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಕೆಲವೊಮ್ಮೆ ಮಕ್ಕಳಿಗೆ ಉಪ್ಪು ಹಾಗೂ ರೊಟ್ಟಿ ಮಾತ್ರ ನೀಡಲಾಗುತ್ತದೆ. ಕೆಲವೊಮ್ಮೆ ಉಪ್ಪು ಹಾಗೂ ಅನ್ನ. ಅಪರೂಪಕ್ಕೊಮ್ಮೆ ಹಾಲು ಬಂದಾಗ, ಅದನ್ನು ವಿತರಿಸುವುದೇ ಇಲ್ಲ. ಬಾಳೆಹಣ್ಣನ್ನಂತೂ ಮಕ್ಕಳು ಕಂಡೇ ಇಲ್ಲ. ಒಂದು ವರ್ಷದಿಂದ ಇದೇ ಪರಿಸ್ಥಿತಿ ಎಂದು ಪೋಷಕರೊಬ್ಬರು ವಿವರಿಸಿದ್ದಾರೆ.

"ಈ ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಸತ್ಯಾಂಶವಿರುವುದು ಕಂಡುಬಂದಿದೆ. ಇದು ಶಾಲೆಯ ಶಿಕ್ಷಕರು ಹಾಗೂ ಗ್ರಾಮಪಂಚಾಯ್ತಿ ಮೇಲ್ವಿಚಾರಕರ ಲೋಪ. ಇಬ್ಬರನ್ನೂ ಅಮಾನತುಗೊಳಿಸಲಾಗಿದೆ" ಎಂದು ಉನ್ನತ ಸರ್ಕಾರಿ ಅಧಿಕಾರಿ ಅನುರಾಗ್ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News