25ರಂದು ದುಬೈ ಬಿಸಿಎಫ್‌ನಿಂದ ವಿದ್ಯಾರ್ಥಿ ವೇತನ- ಹೊಲಿಗೆ ಯಂತ್ರ ವಿತರಣೆ

Update: 2019-08-23 17:34 GMT

ಮಂಗಳೂರು, ಆ.23: ದುಬೈ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್)ನಿಂದ ಆ. 25ರಂದು ವಿದ್ಯಾರ್ಥಿ ವೇತನ ಹಾಗೂ 45 ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮ ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಬಿಸಿಎಫ್‌ನ ಅಧ್ಯಕ್ಷ ಡಾ.ಬಿ.ಕೆ. ಯೂಸುಫ್, ಆರ್ಥಿಕವಾಗಿ ಹಿಂದುಳಿದ ಕೌಟುಂಬಿಕ ಹಿನ್ನೆಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 17 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗೆ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು ಎಂದರು. ಅಂದು ಬೆಳಗ್ಗೆ 9:40ಕ್ಕೆ ಕೆರಿಯರ್ ಗೈಡೆನ್ಸ್ ಸಿಂಪೋಸಿಯಂ ಕಾರ್ಯಕ್ರಮವನ್ನು ಯುಎಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಪ್ರೊ.ಡಾ.ಕಾಪು ಮುಹಮ್ಮದ್ ನಡೆಸಿಕೊಡಲಿದ್ದಾರೆ. ಪೂರ್ವಾಹ್ನ 11 ಗಂಟೆಗೆ ವಿದ್ಯಾರ್ಥಿ ವೇತನ ಹಾಗೂ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಮಾಜಿ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಸಂಯುಕ್ತ ಖಾಝಿ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಆಶೀರ್ವಚನ ನೀಡಲಿದ್ದಾರೆ.

ಶಾಸಕ ವೇದವ್ಯಾಸ ಕಾಮತ್ ದಿಕ್ಸೂಚಿ ಭಾಷಣ ನೀಡಲಿದ್ದು, ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಬಿಸಿಎಫ್‌ನ ಮುಖ್ಯ ಸಲಹೆಗಾರ ಝಫರುಲ್ಲಾ ಖಾನ್ ವಿದ್ಯಾರ್ಥಿ ವೇತನ ವಿತರಣೆ ಮಾಡಲಿರುವರು. ವಿಧಾನ ಪರಿಷತ್‌ನ ಸದಸ್ಯ ಐವನ್ ಡಿಸೋಜ ಹೊಲಿಗೆ ಯಂತ್ರ ವಿತರಿಸಲಿರುವರು. ಮಾಜಿ ಶಾಸಕ ಮೊಯ್ದಿನ್ ಬಾವಾ ಮತ್ತು ಮನಪಾ ಆಯುಕ್ತ ಮುಹಮ್ಮದ್ ನಝೀರ್ ಸಲಹಾ ಭಾಷಣ ಮಾಡಲಿದ್ದಾರೆ.

ಬಿಸಿಎಫ್‌ನ ಕಾರ್ಯಚಟುವಟಿಕೆಗಳು ಮತ್ತು ಮುಂದಿನ ಯೋಜನೆಗಳ ಬಗ್ಗೆ ಬಿಸಿಎಫ್ ಸ್ಕಾಲರ್‌ಶಿಪ್ ಕಮಿಟಿಯ ಅಧ್ಯಕ್ಷ ಎಂ.ಇ. ಮೂಳೂರು ಮಾಡಲಿದ್ದು, ಬಿಸಿಎಫ್ ಪೋಷಕ ಬಿ.ಎಂ. ಮುಮ್ತಾಝ್ ಅಲಿ ಸ್ವಾಗತಿಸಲಿದ್ದಾರೆ ಎಂದು ಅವರು ವಿವರಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಿ.ಎ.ಬಾವಾ, ಮಾಜಿ ಎಂಎಲ್‌ಸಿ ಕ್ಯಾ. ಗಣೇಶ್ ಕಾರ್ಣಿಕ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಅಧ್ಯಕ, ಹಾಜಿ ಎಸ್.ಎಂ. ರಶೀದ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾದ ಡಾ.ಯು.ಟಿ. ಇಫ್ತಿಕಾರ್ ಅಲಿ, ಮಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಎ.ಎಂ. ಖಾನ್ ಭಾಗವಹಿಸಲಿದ್ದಾರೆ. ಗಲ್ಫ್ ರಾಷ್ಟ್ರಗಳಿಂದ ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭ ಎಸೆಸೆಲ್ಸಿ, ಪಿಯುಸಿ ಹಾಗೂ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬಿಸಿಎಫ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಕಾರ್ಯಕ್ರಮದ ಸಂಘಟಕರಾಗಿ ಸಹಕರಿಸಲಿದೆ ಎಂದು ಡಾ. ಬಿ.ಕೆ. ಯೂಸುಫ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ಕಾಲರ್‌ಶಿಪ್ ಕಮಿಟಿಯ ಅಧ್ಯಕ್ಷ ಎಂ.ಇ. ಮೂಳೂರು, ಬಿಸಿಎಫ್‌ನ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್, ಪೋಷಕರಾದ ಬಿ.ಎಂ. ಮುಮ್ತಾಝ್ ಅಲಿ, ಉಪಾಧ್ಯಕ್ಷ ಅಮೀರುದ್ದೀನ್ ಎಸ್.ಐ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News