ಪ್ರಧಾನಿಯನ್ನು ಸದಾ ವಿರೋಧಿಸುವುದು ತಪ್ಪು ಎಂದ ಜೈರಾಮ್ ಹೇಳಿಕೆಗೆ ಸಿಂಘ್ವಿ, ತರೂರ್ ಬೆಂಬಲ

Update: 2019-08-23 12:18 GMT
ಜೈರಾಮ್ ರಮೇಶ್, ಅಭಿಷೇಕ್ ಸಿಂಘ್ವಿ, ಶಶಿ ತರೂರ್

ಹೊಸದಿಲ್ಲಿ, ಆ.23: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸದಾ ವಿರೋಧಿಸುವುದು ತಪ್ಪು ಎಂಬ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರ ಹೇಳಿಕೆಯನ್ನು ಪಕ್ಷದ ಸಹೋದ್ಯೋಗಿಗಳಾದ ಅಭಿಷೇಕ್ ಸಿಂಘ್ವಿ ಹಾಗೂ ಶಶಿ ತರೂರ್ ಬೆಂಬಲಿಸಿದ್ದಾರೆ.

ಗುರುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಮೇಶ್, ಮೋದಿ ಆಡಳಿತ ಮಾದರಿಯು ಸಂಪೂರ್ಣವಾಗಿ ಋಣಾತ್ಮಕತೆ ಹೊಂದಿಲ್ಲ. ಕೆಲಸವನ್ನು ಗುರುತಿಸದೇ, ಸದಾ ಕಾಲ ಅವರನ್ನು ರಾಕ್ಷಸನಂತೆ ಬಿಂಬಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದರು.

ರಮೇಶ್ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ ಸಿಂಘ್ವಿ,‘‘ಮೋದಿಯನ್ನು ರಾಕ್ಷಸೀಕರಣಗೊಳಿಸುವುದು ತಪ್ಪು ಎಂದು ಯಾವಾಗಲೂ ಹೇಳುತ್ತಿದ್ದೆ.ಅವರು ದೇಶದ ಪ್ರಧಾನಿ ಮಾತ್ರವಲ್ಲ, ಒಂದು ಹಾದಿಯಲ್ಲಿ ವಿಪಕ್ಷಗಳು ಅವರಿಗೆ ನೆರವಾಗಬೇಕು ಎಂದು ಟ್ವೀಟ್ ಮಾಡಿದ್ದರು.

‘‘ಕ್ರಮಗಳು ಕೆಲವೊಮ್ಮೆ ಉತ್ತಮ, ಕೆಟ್ಟ ಹಾಗೂ ವಿಭಿನ್ನವಾಗಿರುತ್ತದೆ-ಇದನ್ನು ವಿಚಾರದ ದೃಷ್ಟಿಯಿಂದ ತೀರ್ಮಾನಿಸಬೇಕೆ ಹೊರತು ವ್ಯಕ್ತಿಗತವಾಗಿ ಅಲ್ಲ’’ ಎಂದು ಸಿಂಘ್ವಿ ಹೇಳಿದ್ದಾರೆ.

 ‘‘ನಿಮಗೆಲ್ಲರಿಗೂ ಗೊತ್ತಿರುವಂತೆ ನಾನು ಆರು ವರ್ಷಗಳಿಂದ ನರೇಂದ್ರ ಮೋದಿ ಅವರು ಏನಾದರೂ ಹೇಳಿದರೆ, ಸರಿಯಾದ ಕೆಲಸ ಮಾಡಿದರೆ ಪ್ರಶಂಸಿಸಬೇಕು ಎಂದು ಹೇಳುತ್ತಾ ಬಂದಿದ್ದೇನೆ. ಅವರು ತಪ್ಪು ಮಾಡಿದಾಗ ಇದು ನಮ್ಮ ಟೀಕೆಗೆ ವಿಶ್ವಾಸಾರ್ಹತೆಯನ್ನು ನೀಡುತ್ತದೆ’’ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News