ಕಚೇರಿಯಿಂದ ಮಾಜಿ ಸ್ಪೀಕರ್ ಎಗರಿಸಿದ್ದ ಕಂಪ್ಯೂಟರ್ ಗಳನ್ನು ಮನೆಯಿಂದ ಕದ್ದ ಕಳ್ಳರು!

Update: 2019-08-23 12:00 GMT
ಕೊಡೇಲಾ ಶಿವಪ್ರಸಾದ್ ರಾವ್ 

ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್ ಕೊಡೇಲಾ ಶಿವಪ್ರಸಾದ್ ರಾವ್ ಅವರು ಕಚೇರಿಯಿಂದ ಮನೆಗೆ ಒಯ್ದಿದ್ದರು ಎನ್ನಲಾದ ಎರಡು ಕಂಪ್ಯೂಟರ್‍ಗಳು ಅವರ ಸೆಟ್ಟೆನಪಳ್ಳಿ ನಿವಾಸದಿಂದ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಈ ಕಂಪ್ಯೂಟರ್‍ಗಳು ಸ್ಪೀಕರ್ ಕಚೇರಿಗೆ ಸೇರಿದ್ದು ಎನ್ನಲಾಗಿದ್ದು, ಹೈದರಾಬಾದ್‍ನಿಂದ ಅಮರಾವತಿಗೆ ವರ್ಗಾವಣೆಯಾಗುವ ಸಂದರ್ಭದಲ್ಲಿ ಗುಂಟೂರು ಜಿಲ್ಲೆಯ ಸೆಟ್ಟೆನಪಳ್ಳಿ ಎಂಬಲ್ಲಿರುವ ತಮ್ಮ ನಿವಾಸದಲ್ಲಿ ವೈಯಕ್ತಿಕ ಬಳಕೆಗಾಗಿ ಇದನ್ನು ಒಯ್ದಿದ್ದರು ಎಂದು ಹೇಳಲಾಗಿದೆ.

ಹತ್ತಾರು ಪ್ಲಾಸ್ಟಿಕ್ ಕುರ್ಚಿಗಳು, ಮೂವರು ಕೂರುವ ಸೋಫಾ ಸೆಟ್, ಕಂಪ್ಯೂಟರ್ ಹಾಗೂ ಇತರ ಉಪಕರಣಗಳನ್ನು ರಾವ್ ಕದ್ದಿದ್ದಾರೆ ಎಂದು ವೈಎಸ್‍ಆರ್ ಕಾಂಗ್ರೆಸ್ ಸರ್ಕಾರ ಆಪಾದಿಸಿದೆ. ಆದರೆ ಸ್ಪೀಕರ್ ಕಚೇರಿಯಲ್ಲಿ ಇವುಗಳನ್ನು ಇರಿಸಲು ಸ್ಥಳಾವಕಾಶ ಇಲ್ಲದ ಹಿನ್ನೆಲೆಯಲ್ಲಿ ಇದನ್ನು ಮನೆಗೆ ಒಯ್ಯಲಾಗಿತ್ತು ಎಂದು ರಾವ್ ಸಮರ್ಥಿಸಿಕೊಂಡಿದ್ದಾರೆ. ಹೊಸ ಅಸೆಂಬ್ಲಿ ಸಂಕೀರ್ಣ ನಿರ್ಮಾಣವಾಗುವವರೆಗೆ ಇದನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾಗಿ ಅವರು ಹೇಳಿದ್ದಾರೆ.

ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅದನ್ನು ಮರಳಿಸುತ್ತೇನೆ ಅಥವಾ ಅದಕ್ಕೆ ಬೆಲೆ ನಿಗದಿಪಡಿಸಿದರೆ ಖರೀದಿಸುತ್ತೇನೆ ಎಂದು ಪತ್ರ ಬರೆದಿದ್ದೆ. ಅದಕ್ಕೆ ಉತ್ತರ ಬಂದಿಲ್ಲ ಎಂದು ರಾವ್ ಹೇಳಿದ್ದಾರೆ.

ಸೆಟ್ಟೆನಪಳ್ಳಿ ವೈಎಸ್‍ಆರ್‍ಸಿಪಿ ಶಾಸಕ ಅಂಬಟಿ ರಾಮಬಾಬು ಹೇಳುವಂತೆ, ರಾವ್ ಅವರು ಉದ್ದೇಶಪೂರ್ವಕವಾಗಿ ಇವುಗಳನ್ನು ಕದ್ದಿದ್ದಾರೆ. ಇದೀಗ ಕಳ್ಳರನ್ನು ಹಿಡಿಯಲಾಗಿದ್ದು, ರಾವ್ ಕಥೆ ಕಟ್ಟಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವುಗಳನ್ನು ಏಕೆ ಮರಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News