ಡಾ. ಕಫೀಲ್ ಅಮಾನತು ರದ್ದು ಮಾಡಿ: ಕೊನೆಗೂ ಐಎಂಎ ಶಿಫಾರಸ್ಸು

Update: 2019-08-24 03:46 GMT

ಹೊಸದಿಲ್ಲಿ: ಗೋರಖ್‌ಪುರ ದುರಂತ ನಡೆದು ಎರಡು ವರ್ಷಗಳ ಸತತ ಪ್ರಯತ್ನದ ಬಳಿಕ ಇದೀಗ ಡಾ. ಕಫೀಲ್ ಖಾನ್ ಅವರಿಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಬೆಂಬಲ ಸಿಕ್ಕಿದೆ.

ಗೋರಖ್‌ಪುರದ ಬಿಆರ್‌ಡಿ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಿಂದಾಗಿ ಹಲವು ಮಕ್ಕಳು ಮೃತಪಟ್ಟಿದ್ದರು. ಘಟನೆ ಹಿನ್ನೆಲೆಯಲ್ಲಿ ಖಾನ್ ಅಮಾನತುಗೊಂಡಿದ್ದರು. ಇದೀಗ ಅವರ ವಿರುದ್ಧದ ಅಮಾನತು ರದ್ದುಪಡಿಸುವಂತೆ ಹಾಗೂ ಡಾ. ಕಫೀಲ್‌ ಖಾನ್ ವಿರುದ್ಧದ ಎಲ್ಲ ಕಾನೂನು ಕ್ರಮ ಕೈಬಿಡುವಂತೆ ಐಎಂಎ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಪೂರೈಕೆದಾರರಿಗೆ ಬಿಲ್ ಪಾವತಿಸದೇ ಇದ್ದುದು ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಗೆ ಕಾರಣ. ಆದರೆ ಕಫೀಲ್ ಅವರು ಸ್ವಂತ ಹಣದಿಂದ ಸಿಲಿಂಡರ್ ತಂದು ಹಲವಾರು ಮಕ್ಕಳ ಜೀವ ರಕ್ಷಿಸಿದರೂ, ಅವರ ವಿರುದ್ಧ ನಿರ್ಲಕ್ಷ್ಯ ಆರೋಪ ಹೊರಿಸಲಾಗಿದೆ ಎಂದು ಪತ್ರದಲ್ಲಿ ಐಎಂಎ ಸ್ಪಷ್ಟಪಡಿಸಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದ ಈ ಅಂಶ ಬಹಿರಂಗವಾಗಿದೆ. 2017ರ ಆಗಸ್ಟ್ 10, 11 ಮತ್ತು 12ರಂದು 54 ಗಂಟೆಗಳ ಕಾಲ ದ್ರವ ಆಮ್ಲಜನಕದ ಕೊರತೆ ಉಂಟಾಗಿತ್ತು ಎಂದು ಸರ್ಕಾರ ಒಪ್ಪಿಕೊಂಡಿತ್ತು. ಮಕ್ಕಳ ಜೀವರಕ್ಷಣೆಗಾಗಿ ಖಾನ್ ಜಂಬೋ ಆಮ್ಲಜನಕ ಸಿಲಿಂಡರ್ ವ್ಯವಸ್ಥೆ ಮಾಡಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಇಲಾಖಾ ವಿಚಾರಣೆಯಲ್ಲಿ ಕೂಡಾ ಡಾ. ಖಾನ್ ಅವರ ನಿರ್ಲಕ್ಷ್ಯ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ಐಎಂಎ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News