ಜೇಟ್ಲಿ ನಿವಾಸದ ಟೇಬಲ್ ಮೇಲಿದ್ದದ್ದು ಈ ಇಬ್ಬರ ಫೋಟೋ !

Update: 2019-08-24 13:44 GMT

ಹೊಸದಿಲ್ಲಿ, ಆ.24: ಶನಿವಾರ ನಿಧನರಾದ ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಮೊನಚು ಹಾಗು ಅಷ್ಟೇ ಸಭ್ಯ ಮಾತುಗಾರಿಕೆಗೆ ಸುಪ್ರಸಿದ್ಧರು. ಬಿಜೆಪಿ ವಿರೋಧಿಗಳೂ ಅವರ ಸಮರ್ಥ ವಾದ ಮಂಡನೆಗಾಗಿಯೇ ಅವರ ಟಿವಿ ಚರ್ಚೆಗಳನ್ನು ಬಿಡದೆ ನೋಡುತ್ತಿದ್ದರು. 

ಬಿಜೆಪಿಯ ಈಗಿನ ಸಂಬಿತ್ ಪಾತ್ರ ಶೈಲಿಯ ವಕ್ತಾರರಿಗಿಂತ ಅವರ ಮಾತಿನ ಶೈಲಿ ಮತ್ತು ಗಾಂಭೀರ್ಯ ಸಂಪೂರ್ಣ ಭಿನ್ನವಾಗಿತ್ತು. ಅದು ಎಂದೂ ಘನತೆಯ ಮೇರೆ ಮೀರುತ್ತಿರಲಿಲ್ಲ. ಅಂತಹ ಜೇಟ್ಲಿ ಅವರ ವಿಶಾಲ ಸ್ನೇಹಿತರ ಬಳಗದ ಕುರಿತು ರಾಜಕೀಯ ನಾಯಕರು, ಪತ್ರಕರ್ತರು ನೆನಪಿಸಿಕೊಂಡಿದ್ದಾರೆ. 

ಬಿಜೆಪಿಯ ಅತ್ಯಂತ ಹಿರಿಯ ನಾಯಕರಾಗಿದ್ದು, ಆ ಪಕ್ಷದ ನೀತಿನಿಯಮಗಳನ್ನು ಮುಲಾಜಿಲ್ಲದೆ ಸಮರ್ಥಿಸಿಕೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿದ್ದ ಜೇಟ್ಲಿ ಪಕ್ಷದ ಗಡಿಯನ್ನು ಮೀರಿ ಎಲ್ಲ ಪಕ್ಷ ಹಾಗು ಕ್ಷೇತ್ರಗಳಿಂದ ಸ್ನೇಹಿತರನ್ನು ಸಂಪಾದಿಸುವುದರಲ್ಲಿ ಅಷ್ಟೇ ಮುಂದಿದ್ದರು ಎಂಬುದು ಎಲ್ಲರ ಅಭಿಪ್ರಾಯ. ಅವರಿಗೆ ಎಲ್ಲ ಪಕ್ಷಗಳಲ್ಲೂ ಮಿತ್ರರಿದ್ದರು. ಅವರ ಕೆಲವು ಅತ್ಯಾಪ್ತ ಮಿತ್ರರು ಬೇರೆ ಪಕ್ಷಗಳಲ್ಲಿದ್ದವರು ಎಂಬುದು ಗಮನಾರ್ಹ. 

ಹಿರಿಯ ಪತ್ರಕರ್ತ ಶೇಖರ್ ಗುಪ್ತ ಈ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅರುಣ್ ಜೇಟ್ಲಿ ಅವರ ಖಾಸಗಿ ನಿವಾಸದಲ್ಲಿ ಅವರು ಓದಲು, ಬರೆಯಲು ಕುಳಿತುಕೊಳ್ಳುವ ಡೆಸ್ಕ್ ಮೇಲೆ ಇಟ್ಟುಕೊಂಡಿರುವ ಎರಡು ಫೋಟೋಗಳೂ ಬಿಜೆಪಿ ಅಥವಾ ಸಂಘ ಪರಿವಾರದ ನಾಯಕರದ್ದಲ್ಲ. ಬದಲಾಗಿ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಮಾಧವ ರಾವ್ ಸಿಂಧಿಯಾ (ಇವರು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ) ಹಾಗು ಖ್ಯಾತ ಹೊಟೇಲಿಗ ಹಾಗು ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಲಲಿತ್ ಸೂರಿ ಅವರದ್ದು. ಸಿಂಧಿಯಾ ಹಾಗು ಸೂರಿ ಅವರು ಜೇಟ್ಲಿ ಅವರ ಆಪ್ತ ಮಿತ್ರರಾಗಿದ್ದವರು. ಈ ಗುಂಪಿನಲ್ಲಿದ್ದ ಇನ್ನೊಬ್ಬರು ‘ಹಿಂದೂಸ್ತಾನ್ ಟೈಮ್ಸ್’ ಸಮೂಹದ ಮುಖ್ಯಸ್ಥೆ ಶೋಭನಾ ಭಾರತಿ. 

ಮಾಧವ ರಾವ್ ಸಿಂಧಿಯಾ 

ಲಲಿತ್ ಸೂರಿ

ಶೋಭನಾ ಭಾರತಿ

ಜೇಟ್ಲಿ ದಿಲ್ಲಿ ಪತ್ರಕರ್ತರ ನಡುವೆ ಕೂಡ ಬಹಳ ಸಲಿಗೆ ಇಟ್ಟುಕೊಂಡಿದ್ದವರು. ಬಹುತೇಕ ಎಲ್ಲ ಪ್ರಮುಖ ದಿನಪತ್ರಿಕೆಗಳು, ನಿಯತಕಾಲಿಕಗಳು, ಟಿವಿ ಚಾನಲ್ ಗಳ ಸಂಪಾದಕರು, ಬ್ಯುರೋ ಮುಖ್ಯಸ್ಥರು, ಹಿರಿಯ ವರದಿಗಾರರು ಜೇಟ್ಲಿ ಅವರಿಗೆ ಆಪ್ತರಾಗಿದ್ದರು. ಪತ್ರಕರ್ತರನ್ನು ಊಟ ತಿಂಡಿಗೆ ಆಹ್ವಾನಿಸುವುದು, ಅವರೊಂದಿಗೆ ಚರ್ಚಿಸುವುದು, ಅವರಿಗೆ ದಿಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತ ಒಳನೋಟ ನೀಡುವುದು ಇತ್ಯಾದಿ ನಡೆಯುತ್ತಿತ್ತು. ಈ ಆತ್ಮೀಯತೆಯಿಂದಾಗಿ ಜೇಟ್ಲಿ ದಿಲ್ಲಿಯ ಮಾಧ್ಯಮಗಳನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದಾರೆ, ಅವರಿಗೆ ಬೇಕಾದ ಸುದ್ದಿಗಳು ಮಾತ್ರ ಬರುತ್ತವೆ, ಬೇಡದ ಸುದ್ದಿಗಳು ಮೂಲೆ ಸೇರುತ್ತವೆ ಎಂಬ ಆರೋಪಗಳನ್ನೂ ಎದುರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News