ಉಡುಪಿ: ವಿಟ್ಲಪಿಂಡಿಯೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಸಂಪನ್ನ

Update: 2019-08-24 14:37 GMT

ಉಡುಪಿ, ಆ.24: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕಳೆದೊಂದು ವಾರದಿಂದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ನೇತೃತ್ವ ದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ಇಂದು ಆಕರ್ಷಕ ಶ್ರೀಕೃಷ್ಣ ಲೀಲೋತ್ಸವ-ವಿಟ್ಲಪಿಂಡಿಯೊಂದಿಗೆ ಸಂಪನ್ನಗೊಂಡಿತು.

ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶೃದ್ಧೆ, ಭಕ್ತಿಗಳಿಂದ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ವೀಕ್ಷಿಸಿದರಲ್ಲದೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಇಂದು ನಡೆದ ಶ್ರೀಕೃಷ್ಣ ಲೀಲೋತ್ಸವಕ್ಕೆ ಪೂರ್ವಭಾವಿಯಾಗಿ ಕಳೆದೊಂದು ವಾರದಿಂದ ಶ್ರೀಕೃಷ್ಣ ಮಠ ಹಾಗೂ ರಾಜಾಂಗಣದಲ್ಲಿ ಹಲವು ಕಾರ್ಯಕ್ರಮ ಗಳು ಮತ್ತು ಸ್ಪರ್ಧೆಗಳು ನಡೆದಿದ್ದವು. ಇಂದು ನಂದಗೋಕುಲದಲ್ಲಿ ಬಾಲಕೃಷ್ಣನ ತುಂಟತನವನ್ನು ನೆನಪಿಸುವ ವಿಶಿಷ್ಟವಾದ ವಿಟ್ಲಪಿಂಡಿ (ಮೊಸರು ಕುಡಿಕೆ) ಆಟದಲ್ಲಿ ಜನಸಮೂಹ ಭಾಗಿಯಾಗಿ ಖುಷಿಪಟ್ಟಿತು.

ಶುಕ್ರವಾರ ಮಧ್ಯರಾತ್ರಿ 12:12ಕ್ಕೆ ಪರ್ಯಾಯ ಪಲಿಮಾರುಶ್ರೀಗಳು ಮೊದಲು ಗರ್ಭಗುಡಿಯಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿ ಬಳಿಕ ಚಂದ್ರೋದಯದ ಸಮಯದಲ್ಲಿ ಹೊರಗೆ ತೀರ್ಥ ಮಂಟಪದ ಬಳಿ ತುಳಸಿಕಟ್ಟೆ ಯಲ್ಲಿ ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಿದರು. ಅವರೊಂದಿಗೆ ಉಪಸ್ಥಿತರಿದ್ದ ಉಳಿದ ಸ್ವಾಮೀಜಿಗಳು ಸರದಿಯಂತೆ ಅರ್ಘ್ಯ ಪ್ರದಾನ ಮಾಡಿದ ಬಳಿಕ ನೆರೆದ ಭಕ್ತಾದಿಗಳಿಗೆ ಅರ್ಘ್ಯ ಬಿಡಲು ಅವಕಾಶ ನೀಡಲಾಯಿತು.

ಶೋಭಾ ಯಾತ್ರೆ  : ಇಂದು ಅಪರಾಹ್ಣ 3 ಗಂಟೆ ಸುಮಾರಿಗೆ ವಿಟ್ಲಪಿಂಡಿ ಉತ್ಸವ ಆರಂಭಗೊಂಡಿತು. ಶ್ರೀಕೃಷ್ಣ ಲೀಲೋತ್ಸವದ ವೈಭವದ ಶೋಭಾ ಯಾತ್ರೆಯಲ್ಲಿ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅಲ್ಲದೇ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವತೀರ್ಥರು ಪಾಲ್ಗೊಂಡರು.

ಈ ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯಿ (ಮಣ್ಣಿನಲ್ಲಿ ತಯಾರಿಸಿದ ನೀಲಿ ಬಣ್ಣದ ಶ್ರೀಕೃಷ್ಣನ ಮೂರ್ತಿ) ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಇನ್ನೊಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಉತ್ಸವ ಮೂರ್ತಿುನ್ನಿರಿಸಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಸಲುವಾಗಿ ಮಣ್ಣಿನ ಮಡಕೆಯಲ್ಲಿ ಮೊಸರು, ಹಾಲು, ಓಕುಳಿಗಳನ್ನು ತುಂಬಿ ರಥಬೀದಿಯ ಸುತ್ತಲೂ ವಿಶೇಷವಾಗಿ ನಿರ್ಮಿಸಿದ 13 ಗುರ್ಜಿಗಳಿಗೆ ಅವುಗಳನ್ನು ಕಟ್ಟಿ ಯಾದವ ವೇಷಧಾರಿಗಳಾದ ಉಡುಪಿಯ ಗೊಲ್ಲರು ಉದ್ದನೆಯ ಕೋಲುಗಳಿಂದ ಮಡಕೆಗಳನ್ನು ಒಡೆಯುವ ಆಟವನ್ನು ಆಡಲಾಯಿತು. ಇದನ್ನು ಮೊಸರು ಕುಡಿಕೆ ಎಂದು ಕರೆಯಲಾಗುತ್ತದೆ. ಇದು ಕೃಷ್ಣನಿಗೆ ಅತ್ಯಂತ ಪ್ರಿಯ ಆಟವೆಂಬುದು ಜನರ ನಂಬಿಕೆಯಾಗಿದೆ.

ಈ ಆಟವನ್ನು ರಥಬೀದಿಯ ಸುತ್ತಲೂ ಆಡಿದ ನಂತರ ಮೆರವಣಿಗೆಯ ಕೊನೆಯಲ್ಲಿ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಈ ಬಾರಿಯ ಕೃಷ್ಣ ಜನ್ಮಾ್ಟಮಿ ವಿಧಿಗಳು ಸಂಪನ್ನಗೊಂಡವು.

ಬಳಿಕ ರಥಬೀದಿಯ ಅನೇಕ ಕಡೆಗಳಲ್ಲಿ, ಮಠ ಆಸುಪಾಸಿನಲ್ಲಿ ಹಾಕಲಾದ ವೇದಿಕೆಯಲ್ಲಿ ಹುಲಿ ವೇಷಗಳು ಹಾಗೂ ಇತರ ವೇಷಗಳು ವಿಶೇಷ ಪ್ರದರ್ಶನ ನೀಡಿದವು. ಇಡೀ ವಿಟ್ಲಪಿಂಡಿ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಈ ಬಾರಿಯೂ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥರ ಅನುಪಸ್ಥಿತಿ ಎದ್ದು ಕಂಡಿತು. ಸೇರಿದ ನೂರಾರು ಮಂದಿ ಇಂದು ಸಹ ಅವರನ್ನು ಸ್ಮರಿಸಿಕೊಂಡರಲ್ಲದೇ ಕೆಲವು ಸಂಘಟನೆಗಳು ಅವರ ನೆನಪಿನಲ್ಲಿ ಕೆಲವು ಕಾಯರ್ಕ್ರಮಗಳನ್ನು ಹಮ್ಮಿಕೊಂಡವು.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸೇರಿದ ಜನರ ತೀರಾ ಕಡಿಮೆ ಇತ್ತು. ಕಳೆದೆರಡು ದಿನಗಳ ಸತತ ಮಳೆಯಿಂದ ಉತ್ಸವ ಭಾರೀ ಪ್ರಮಾಣದಲ್ಲಿ ಕಳೆಗುಂದಿತ್ತು. ಆದರೆ ಇಂದು ಅಪರಾಹ್ನ 12 ಗಂಟೆಯ ಬಳಿಕ ವಿಶ್ರಾಂತಿ ಪಡೆದ ಮಳೆ ಜನರ ಉತ್ಸಾಹಕ್ಕೆ ಇಂದು ತಣ್ಣೀರೆರಚಲಿಲ್ಲ. ಇದರೊಂದಿಗೆ ಈ ಬಾರಿ ವೇಷಧಾರಿಗಳ ಸಂಖ್ಯೆಯೂ ಕಡಿಮೆ ಇತ್ತು. ಕೆಲವು ಹುಲಿವೇಷ ತಂಡ ಹಾಗೂ ಉತ್ತರ ಕರ್ನಾಟಕ ಮೂಲದ ಮಕ್ಕಳು ವೇಷ ಧರಿಸಿದ್ದನ್ನು ಬಿಟ್ಟರೆ ಉಳಿದ ವೇಷಗಳು ತೀರಾ ವಿರಳವಾಗಿದ್ದವು. ಇದು ಬಿಟ್ಟರೆ ಕೆಲವರು ವಿವಿಧ ಘನ ಉದ್ದೇಶಗಳಿಗಾಗಿ ಹಾಕಿದ ಬಗೆಬಗೆಯ ವೇಷಗಳು ಜನರ ಗಮನ ಸೆಳೆದವು.

ರಾಜಾಂಗಣ ಸೇರಿದಂತೆ ಮಠದ ವಿವಿದೆಡೆಗಳಲ್ಲಿ ಇಂದು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ರಾಜಾಂಗಣದಲ್ಲಿ ನಡೆದ ಸಂತರ್ಪಣೆ ಯಲ್ಲಿ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಅಲ್ಲದೇ ಕೃಷ್ಣನಿಗೆ ಕಳೆದ ರಾತ್ರಿ ಅರ್ಪಿಸಿದ ಉಂಡೆ ಮತ್ತು ಚಕ್ಕುಲಿಗಳನ್ನು ಅಲ್ಲಲ್ಲಿ ಭಕ್ತರಿಗೆ ಹಂಚಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News