ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಅರಿವು ಮೂಡಿಸಲು ಸಿಬಿಎಸ್‌ಇಯ ‘ಒಂದು ಮಗು ಒಂದು ಗಿಡ’ ಅಭಿಯಾನ

Update: 2019-08-24 15:32 GMT

ಹೊಸದಿಲ್ಲಿ,ಆ.24: ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶದಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ತನ್ನ ಸಂಯೋಜಿತ ಶಾಲೆಗಳು ಯುಥ್ ಮತ್ತು ಇಕೋ ಕ್ಲಬ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಈ ಕ್ಲಬ್‌ಗಳ ಚಟುವಟಿಕೆಗಳಿಗೆ ಸರಕಾರವು ಆರ್ಥಿಕ ನೆರವನ್ನು ಒದಗಿಸಲಿದೆ. ‘ ಒಂದು ಮಗು ಒಂದು ಗಿಡ ’ಹೆಸರಿನಲ್ಲಿ ಬೃಹತ್ ಗಿಡ ನೆಡುವಿಕೆ ಅಭಿಯಾನಕ್ಕೂ ಸಿಬಿಎಸ್‌ಇ ಚಾಲನೆ ನೀಡಿದ್ದು,ಎಲ್ಲ ತರಗತಿಗಳ ಪ್ರತಿಯೊಬ್ಬ ವಿದ್ಯಾರ್ಥಿಯು ಮನೆ ಅಥವಾ ಶಾಲೆ ಈ ಪೈಕಿ ತನಗೆ ಅನುಕೂಲಕರವಾದ ಸ್ಥಳದಲ್ಲಿ ಒಂದು ಸಸಿಯನ್ನು ನೆಡಬೇಕಾಗುತ್ತದೆ. ವಿದ್ಯಾರ್ಥಿಗಳು ತಾವು ನೆಟ್ಟ ಸಸಿಯ ಕಾಳಜಿ ವಹಿಸುವಂತೆ ಶಾಲೆಗಳು ಅವರಲ್ಲಿ ಅರಿವು ಮೂಡಿಸಬೇಕಾಗುತ್ತದೆ. ಈ ಅಭಿಯಾನದಡಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಕೆಲಸದ ಅನುಭವಕ್ಕಾಗಿ ಆಂತರಿಕ ವೌಲ್ಯಮಾಪನಕ್ಕೆ ಪರಿಗಣಿಸಲಾಗುವುದು.

2019-20ನೇ ಶೈಕ್ಷಣಿಕ ವರ್ಷಕ್ಕಾಗಿ ಜಲ ಸಂರಕ್ಷಣೆಯು ಇಕೋ ಕ್ಲಬ್‌ಗಳ ಚಟುವಟಿಕೆಗಳ ವಿಷಯವಾಗಿರುತ್ತದೆ. ಪ್ರಾಥಮಿಕದಿಂದ ಹಿಡಿದು ಉನ್ನತ ಪ್ರೌಢ ಶಿಕ್ಷಣ ಹಂತಗಳವರೆಗಿನ ಪಠ್ಯಕ್ರಮಗಳಲ್ಲಿ ಪರಿಸರ ಸುಸ್ಥಿರತೆ ಮತ್ತು ಜಲ ಸಂರಕ್ಷಣೆಯನ್ನು ಸೇರಿಸುವಂತೆಯೂ ಸಿಬಿಎಸ್‌ಇ ಶಾಲೆಗಳಿಗೆ ನಿರ್ದೇಶ ನೀಡಿದೆ.

ಜಲ ಸಂರಕ್ಷಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಮನೆ ಹಾಗೂ ಶಾಲೆಯಲ್ಲಿ ಪ್ರತಿದಿನ ಒಂದು ಲೀಟರ್ ನೀರನ್ನು ಉಳಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುವಂತೆಯೂ ಅದು ಶಾಲೆಗಳಿಗೆ ಸೂಚಿಸಿದೆ.

ಶಾಲೆಗಳು ಮುಂದಿನ ಮೂರು ವರ್ಷಗಳಲ್ಲಿ ‘ಜಲ ಸಮರ್ಥ ಶಾಲೆ ’ಗಳಾಗಲು ಗುರಿಯನ್ನೂ ನಿಗದಿಪಡಿಸಿ ಕೊಳ್ಳುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News