ರಾಷ್ಟ್ರೀಯ ಪೊಲೀಸ್ ಅಕಾಡಮಿಯಲ್ಲಿ ತರಬೇತಿ ಮುಗಿಸಿದ 92 ಐಪಿಎಸ್ ಪ್ರೊಬೇಷನರಿಗಳು

Update: 2019-08-24 14:50 GMT

ಹೈದರಾಬಾದ್,ಆ.24: ಇಲ್ಲಿಯ ಸರದಾರ್ ವಲ್ಲಭಭಾಯಿ ಪಟೇಲ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ 12 ಮಹಿಳೆಯರು ಸೇರಿದಂತೆ 92 ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳು ವ್ಯಾಸಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಅಕಾಡೆಮಿಯ ಆವರಣದಲ್ಲಿ ಶನಿವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಈ ಅಧಿಕಾರಿಗಳು ಪಾಸಿಂಗ್ ಔಟ್ ಪರೇಡ್‌ನ್ನು ನಡೆಸಿದರು.

ಪ್ರೊಬೇಷನರಿಗಳ ಪೈಕಿ 57 ಇಂಜಿನಿಯರಿಂಗ್ ಮತ್ತು 11 ವೈದ್ಯಕೀಯ ಪದವೀಧರರಿದ್ದಾರೆ. ಏಳು ಅಧಿಕಾರಿಗಳು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.

92 ಐಪಿಎಸ್ ಪ್ರೊಬೇಷನರಿಗಳ ಜೊತೆಗೆ ರಾಯಲ್ ಭೂತಾನ್ ಪೊಲೀಸ್‌ನ ಆರು ಅಧಿಕಾರಿಗಳು ಮತ್ತು ನೇಪಾಳ ಪೊಲೀಸ್‌ನ ಐವರು ಅಧಿಕಾರಿಗಳೂ ಅಕಾಡೆಮಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

 ಹೆಚ್ಚಿನ ಪ್ರೊಬೇಷನರಿಗಳು ಸಾಮಾನ್ಯ ಕುಟುಂಬ ಹಿನ್ನೆಲೆಗಳಿಂದ ಬಂದವರಾಗಿದ್ದಾರೆ. ತೆಲಂಗಾಣ ಕೇಡರ್‌ಗೆ ಹಂಚಿಕೆ ೆಯಾಗಿರುವ ದಿಲ್ಲಿಯ ಗೌಸ್ ಆಲಂ ಅವರು ಅತ್ಯುತ್ತಮ ಸರ್ವಾಂಗೀಣ ಪ್ರೊಬೇಷನರ್‌ಗಾಗಿರುವ ಪ್ರಧಾನಿಗಳ ಬ್ಯಾಟನ್‌ ಮತ್ತು ಗೃಹಸಚಿವಾಲಯದ ರಿವಾಲ್ವರ್‌ನ್ನು ಪಡೆದುಕೊಂಡರು. ಅಧ್ಯಯನಕ್ಕಾಗಿ ಮೆಹ್ತಾ ಕಪ್ ಮತ್ತು ಹೊರಾಂಗಣ ವಿಷಯಗಳಲ್ಲಿ ಪ್ರಾವೀಣ್ಯತೆಗಾಗಿ ಬಿಎಸ್‌ಎಫ್ ಟ್ರೋಫಿಗೂ ಅವರು ಪಾತ್ರರಾದರು.

ಮೂಲತಃ ಬಿಹಾರದ ಗಯಾ ಜಿಲ್ಲೆಯವರಾಗಿರುವ ಆಲಂ ದಿಲ್ಲಿಯಲ್ಲಿ ಬೆಳೆದಿದ್ದರು. ಸೇನೆಯಲ್ಲಿ ಸುಬೇದಾರ್ ಆಗಿದ್ದ ತಂದೆಯನ್ನು ಆಲಂ ತನ್ನ ಬಾಲ್ಯದಲ್ಲಿಯೇ ಕಳೆದುಕೊಂಡಿದ್ದರು.

ಐಐಟಿ-ಬಾಂಬೆಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದಿರುವ ಆಲಂ ಯುಪಿಎಸ್‌ಸಿ ಪರೀಕ್ಷೆಗೆ ಬರೆಯುವ ಮುನ್ನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸಿದ್ದರು.

ಉತ್ತರ ಪ್ರದೇಶದ ರಿಚಾ ತೋಮರ್ ಅವರು ಅತ್ಯುತ್ತಮ ಮಹಿಳಾ ಪ್ರೊಬೇಷನರ್‌ಗಾಗಿರುವ 1973ರ ಐಪಿಎಸ್ ತಂಡದ ಟ್ರೋಫಿಯನ್ನು ತನ್ನದಾಗಿಸಿಕೊಂಡರು. ಕೃಷಿಕನ ಪುತ್ರಿಯಾಗಿರುವ ಅವರನ್ನು ರಾಜಸ್ಥಾನ ಕೇಡರ್‌ಗೆ ಹಂಚಿಕೆ ಮಾಡಲಾಗಿದೆ. ಎರಡೂವರೆ ವರ್ಷ ಪ್ರಾಯದ ಗಂಡುಮಗುವಿನ ತಾಯಿಯಾಗಿರುವ ರಿಚಾ ಅವರ ಪತಿ ದಿಲ್ಲಿಯಲ್ಲಿ ಎಸಿಪಿಯಾಗಿದ್ದಾರೆ.

ನೇಪಾಲದ ಕೃಷ್ಣ ಖಡ್ಕಾ ಅವರು ಅತ್ಯುತ್ತಮ ಔಟ್‌ಡೋರ್ ಪ್ರೊಬೇಷನರ್ ಆಗಿ ಐಪಿಎಸ್ ಸಂಘದ ಸ್ವೋರ್ಡ್ ಆಫ ಆನರ್ ಅನ್ನು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News