ಅಮೆಝಾನ್ ಕಾಡಿಗೆ ಬೆಂಕಿ: ಲಕ್ಷಾಂತರ ಮರಗಳು, ಜೀವಜಂತುಗಳು ಸುಟ್ಟು ಕರಕಲು

Update: 2019-08-27 14:36 GMT

ಪೊರ್ಟೊ ವೆಲ್ಹೊ (ಬ್ರೆಝಿಲ್),ಆ.24: ಅಮೆಝಾನ್ ಮಳೆಕಾಡಿನಲ್ಲಿ ವ್ಯಾಪಕವಾಗಿ ಹರಡಿರುವ ಕಾಡ್ಗಿಚ್ಚನ್ನು ನಂದಿಸಲು ಬ್ರೆಝಿಲ್ ಸರಕಾರವು ವಿಫಲವಾಗಿರುವ ಬಗ್ಗೆ ವಿಶ್ವದಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಈ ಮಧ್ಯೆ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರು ಕಾಡ್ಗಿಚ್ಚನ್ನು ನಂದಿಸುವ ಕಾರ್ಯಕ್ಕೆ ನೆರವಾಗಲು ಸಶಸ್ತ್ರ ಪಡೆಗಳನ್ನು ನಿಯೋಜನೆಗೆ ಆದೇಶ ನೀಡಿದ್ದಾರೆ.

  ಬ್ರೆಝಿಲ್‌ನ ವಾಯವ್ಯ ರಾಜ್ಯವಾದ ರೊಂಡೊನಿಯಾದಲ್ಲಿನ ಅಮೆಝಾನ್ ಕಾಡಿನಲ್ಲಿ ಸಾವಿರಾರು ಕಿ.ಮೀ. ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತಿ ಉರಿಯುತ್ತಿದ್ದು, ಲಕ್ಷಾಂತರ ಮರಗಳು, ಜೀವಜಂತುಗಳು ಸುಟ್ಟುನಾಶವಾಗಿವೆ.

 ವಿಶ್ವದ ಅತಿ ದೊಡ್ಡ ಮಳೆಕಾಡೆಂದು ಖ್ಯಾತಿ ಪಡೆದಿರುವ ಅಮೆಝಾನ್ ಅರಣ್ಯದಲ್ಲಿ ಕಳೆದೊಂದು ವಾರದಿಂದ ಭುಗಿಲೆದ್ದಿರುವ ಕಾಡ್ಗಿಚ್ಚನ್ನು ಶಮನಗೊಳಿಸಲು ವಿಫಲವಾಗಿರುವ ಬ್ರೆಝಿಲ್ ಸರಕಾರದ ವಿರುದ್ಧ ಜಗತ್ತಿನ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ಅಮೆಝಾನ್ ಕಾಡ್ಗಿಚ್ಚಿಗೆ ಸಂಬಂಧಿಸಿ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೊನ್ ನಡುವೆ ವಾಕ್ಸಮರ ಭುಗಿಲೆದ್ದಿದೆ.

ಅಮೆಝಾನ್ ಕಾಡ್ಗಿಚ್ಚು ಒಂದು ಅಂತಾರಾಷ್ಟ್ರೀಯ ಬಿಕ್ಕಟ್ಟು ಎಂದು ಮ್ಯಾಕ್ರೊನ್ ಬಣ್ಣಿಸಿದ್ದಾರೆ.ಕಾಡ್ಗಿಚ್ಚಿನ ಶಮನಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಯುರೋಪ್ ಒಕ್ಕೂಟ ಹಾಗೂ ದಕ್ಷಿಣ ಅಮೆರಿಕದ ದೇಶಗಳ ಜೊತೆಗಿನ ವಾಣಿಜ್ಯ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಅವರು ಘೋಷಿಸಿದ್ದಾರೆ.

 ಈ ವರ್ಷ ಬ್ರೆಝಿಲ್‌ನಲ್ಲಿ 76,720 ಕಾಡ್ಗಿಚ್ಚಿನ ಘಟನೆಗಳು ದಾಖಲಾಗಿದ್ದು, ಇದು 2013ರ ಆನಂತರದ ವರ್ಷಗಳಲ್ಲೇ ಗರಿಷ್ಠವೆಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

 ಬೆಳೆಗಳಿಗಾಗಿ ಹೊಲಗಳು ಹಾಗೂ ಜಾನುವಾರುಗಳಿಗೆ ಹುಲ್ಲುಗಾವಲುಗಳನ್ನು ನಿರ್ಮಿಸುವ ಉದ್ದೇಶದಿಂದ ಅರಣ್ಯಗಳನ್ನು ನಾಶಪಡಿಸಲು ಬೆಂಕಿಹಚ್ಚಲಾಗುತ್ತಿರುವುದೇ ಕಾಡ್ಗಿಚ್ಚು ವ್ಯಾಪಕವಾಗಿ ಹರಡಲು ಕಾರಣವೆಂದು ಪರಿಸರತಜ್ಞರು ಆರೋಪಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News