50 ವರ್ಷಗಳ ಸಮಾಜಸೇವೆಯ ಬಳಿಕ ಭಾರತ ತೊರೆದ‌ ಸ್ಪೇನ್‌ ದೇಶದ ನನ್

Update: 2019-08-24 18:40 GMT

 ಹೊಸದಿಲ್ಲಿ,ಆ.24: ಭಾರತದಲ್ಲಿ ಕಳೆದ 50 ವರ್ಷಗಳಿಂದಲೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದ ಸ್ಪೇನ್‌ನ ನನ್ ಎನೆಡಿನಾ (86) ಸರಕಾರವು ತನ್ನ ವೀಸಾ ನವೀಕರಣ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಅನಿವಾರ್ಯವಾಗಿ ತನ್ನ ದೇಶಕ್ಕೆ ಮರಳಿದ್ದು,ಇದು ಒಡಿಶಾದ ಗಜಪತಿ ಜಿಲ್ಲೆಯ ಅಲಿಗಂಡಾ ಗ್ರಾಮದ ನಿವಾಸಿಗಳನ್ನು ಹತಾಶೆಗೆ ತಳ್ಳಿದೆ.

ಎನೆಡಿನಾ ಸುಮಾರು ಐದು ದಶಕಗಳಿಂದಲೂ ಗ್ರಾಮದ ನಿವಾಸಿಗಳಿಗೆ ವೈದ್ಯಕೀಯ ಮತ್ತು ಇತರ ಸೇವೆಗಳನ್ನು ಒದಗಿಸುತ್ತಿದ್ದರು. ವೀಸಾ ನವೀಕರಣ ಅರ್ಜಿ ತಿರಸ್ಕೃತಗೊಂಡ ಬಳಿಕ 10 ದಿನಗಳಲ್ಲಿ ದೇಶದಿಂದ ನಿರ್ಗಮಿಸುವಂತೆ ಅವರಿಗೆ ಆ.11ರಂದು ಸೂಚಿಸಲಾಗಿತ್ತು. ಆ.20ರಂದು ಅವರು ಸ್ಪೇನ್‌ಗೆ ಮರಳಿದ್ದಾರೆ.

ಮ್ಯಾಡ್ರಿಡ್ ಕ್ಯಾಪಿಟಲ್ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿದ್ದ ಎನೆಡಿನಾ 1966ರಲ್ಲಿ ಬೆರ್ಹಾಮಪುರಕ್ಕೆ ಬಂದಿದ್ದರು. ಅಲ್ಲಿ ಸುಮಾರು ಐದು ವರ್ಷ ಸಾಮಾಜಿಕ ಕಾರ್ಯಕರ್ತರಾಗಿ ದುಡಿದ ಬಳಿಕ 1971ರಲ್ಲಿ ಅಲಿಗಂಡಾ ಗ್ರಾಮಕ್ಕೆ ತೆರಳಿದ್ದು,ಅಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದ್ದರು.

 1996ರಲ್ಲಿ ಗ್ರಾಮದಲ್ಲಿ ಪ್ರೌಢಶಾಲೆ ಮತ್ತು 2009ರಲ್ಲಿ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ್ದ ಅವರು,ದೂರದಿಂದ ಬರುವ ಮಕ್ಕಳಿಗೆ ಉಚಿತ ಆಹಾರ ಮತ್ತು ವಸತಿ ಸೌಲಭ್ಯ ಒದಗಿಸಲು ಹಾಸ್ಟೆಲ್‌ನ್ನೂ ನಿರ್ಮಿಸಿದ್ದರು.

‘ ಎನೆಡಿನಾ ಇಲ್ಲಿಯೇ ಉಳಿಯುವಂತಾಗುವಂತೆ ಸರಕಾರವು ಏನಾದರೂ ಮಾಡುತ್ತದೆ ಎಂದು ನಾವು ಆಶಿಸಿದ್ದೆವು. ಅವರು ನಮ್ಮಿಂದ ದೂರವಾಗುತ್ತಿರುವುದು ನೋವನ್ನುಂಟು ಮಾಡಿದೆ. ಅವರು ನಮ್ಮನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಭೇಟಿಯ ಉದ್ದೇಶವು ವೀಸಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಕ್ಕಿಂತ ಭಿನ್ನವಾಗಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ನಿಯಮದಂತೆ ವೀಸಾ ನಿರಾಕರಿಸಲಾಗುತ್ತದೆ. ಇತರ ಯಾವುದೇ ಸರಕಾರದಂತೆ ವೀಸಾ ಮಂಜೂರು ಮಾಡುವುದು ಭಾರತ ಸರಕಾರದ ವಿಶಿಷ್ಟಾಧಿಕಾರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News