ಸಾರ್ವಜನಿಕ ಮಾಹಿತಿಗಾಗಿ ಉಗ್ರರ ಕುರಿತ ಪ್ರಕಟಣೆ: ಮಲ್ಪೆ ಕರಾವಳಿ ಕಾವಲು ಪಡೆ ಸ್ಪಷ್ಟನೆ

Update: 2019-08-25 10:04 GMT

ಉಡುಪಿ, ಆ. 25: ಮಲ್ಪೆ ಕರಾವಳಿ ಕಾವಲು ಪಡೆ ವಿವಿಧ ಕಡೆಗಳಲ್ಲಿ ಹಚ್ಚಿರುವ ಸಾರ್ವಜನಿಕ ಪ್ರಕಟಣೆಯನ್ನು ಅಪಾರ್ಥ ಮಾಡಿಕೊಂಡು ಮಲ್ಪೆ ಪರಿಸರದಲ್ಲಿ ಪಾಕಿಸ್ತಾನದ ಉಗ್ರರಿದ್ದಾರೆಂಬ ತಪ್ಪು ಮಾಹಿತಿ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಮಲ್ಪೆ ಕರಾವಳಿ ಕಾವಲು ಪಡೆ ಸ್ಪಷ್ಟನೆ ನೀಡಿದೆ.

‘ಲಷ್ಕರ್ ಇ ತೋಯ್ಬ ಉಗ್ರಗಾಮಿ ಸಂಘಟನೆಯ ಆರು ಮಂದಿಯ ತಂಡವೊಂದು ತಮಿಳುನಾಡು ಪ್ರವೇಶಿಸಿದ ಬಗ್ಗೆ ಮಾಹಿತಿ ಬಂದಿದ್ದು, ಅದರಲ್ಲಿ ಓರ್ವ ಪಾಕಿಸ್ತಾನದ ಪ್ರಜೆಯಾಗಿರುತ್ತಾನೆ ಎಂಬುದಾಗಿ ತಿಳಿದು ಬಂದಿರುತ್ತದೆ. ಅವರು ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇರುವುದರಿಂದ ಈ ಉಗ್ರರ ಬಗ್ಗೆ ನಿಗಾ ವಹಿಸಲು ಮಲ್ಪೆ ಕರಾವಳಿ ಕಾವಲು ಪಡೆ ಠಾಣೆ ವ್ಯಾಪ್ತಿಯ ಸಮುದ್ರ ಹಾಗೂ ತೀರ ಪ್ರದೇಶದಲ್ಲಿ ಇವರ ಚಹರೆ ಹಾಗೂ ಚಲನವನಗಳು ಕಂಡು ಬಂದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡಲು ಕೋರಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು ಅಪಾರ್ಥ ಮಾಡಿಕೊಂಡು ಮಲ್ಪೆಗೆ ಪಾಕಿಸ್ತಾನದ ಉಗ್ರರು ಬಂದಿರುವ ಸಾಧ್ಯತೆಗಳಿವೆ ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ.

ಈ ಕುರಿತು ಸ್ಪಷ್ಟನೆ ನೀಡಿದ ಮಲ್ಪೆ ಕರಾವಳಿ ಕಾವಲು ಪಡೆಯ ಡಿವೈಎಸ್ಪಿ ಪ್ರವೀಣ್ ನಾಯ್ಕ್ ‘ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಈ ರೀತಿಯ ಸೂಚನೆ ಯನ್ನು ನೀಡಲಾಗಿದ್ದು, ಆ ಹಿನ್ನೆಲೆಯಲ್ಲಿ ಜನರಿಗೆ ಮಾಹಿತಿ ಹಾಗೂ ಎಚ್ಚರ ದಿಂದ ಇರಲಿ ಎಂಬ ಉದ್ದೇಶದಿಂದ ವಿವಿಧ ಕಡೆಗಳಲ್ಲಿ ಈ ಪ್ರಕಟಣೆಯನ್ನು ಹಾಕಲಾಗಿದೆ. ಇದರ ಅರ್ಥ ಪಾಕಿಸ್ತಾನದ ಉಗ್ರರು ಇಲ್ಲಿ ಇದ್ದಾರೆ ಎಂಬುದು ಅಲ್ಲ ಎಂದು ತಿಳಿಸಿದ್ದಾರೆ.

ಈ ರೀತಿಯ ಪ್ರಕಟಣೆಯನ್ನು ಮೇಲಿನ ಸೂಚನೆ ಬಂದಾಗಲೆಲ್ಲ ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಕುತ್ತೇವೆ. ಅದನ್ನು ತಪ್ಪು ಅರ್ಥ ಮಾಡಿ ಕೊಂಡು ಸಾರ್ವಜನಿಕರಿಗೆ ತಪ್ಪು ತಿಳುವಳಿಕೆ ಮೂಡಿಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News