ಸಕಲ ಸರಕಾರಿ ಗೌರವಗಳೊಂದಿಗೆ ಅರುಣ್ ಜೇಟ್ಲಿ ಅಂತ್ಯಕ್ರಿಯೆ

Update: 2019-08-25 14:55 GMT

ಹೊಸದಿಲ್ಲಿ,ಆ.25: ಅನಾರೋಗ್ಯದಿಂದ ಶನಿವಾರ ಇಲ್ಲಿಯ ಏಮ್ಸ್‌ನಲ್ಲಿ ನಿಧನರಾದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ (66) ಅವರ ಅಂತ್ಯಸಂಸ್ಕಾರವನ್ನು ರವಿವಾರ ಮಧ್ಯಾಹ್ನ ಸಕಲ ಸರಕಾರಿ ಗೌರವಗಳೊಂದಿಗೆ ನಿಗಮಬೋಧ ಘಾಟ್‌ನಲ್ಲಿ ನಡೆಸಲಾಯಿತು. ಈ ವೇಳೆ ರಾಜಕೀಯ ನಾಯಕರು, ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಜೇಟ್ಲಿಯವರ ಪುತ್ರ ರೋಹನ್ ಅಂತಿಮ ವಿಧಿಗಳನ್ನು ನೆರವೇರಿಸಿದರು.

 ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ, ಪಕ್ಷಾಧ್ಯಕ್ಷ ಹಾಗೂ ಗೃಹಸಚಿವ ಅಮಿತ್ ಶಾ,  ರಕ್ಷಣಾ ಸಚಿವ ರಾಜನಾಥ ಸಿಂಗ್, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಮತ್ತು ಅನುರಾಗ ಠಾಕೂರ್, ಬಿಜೆಪಿ ಸಂಸದರಾದ ವಿಜಯ ಗೋಯೆಲ್ ಮತ್ತು ವಿನಯ ಸಹಸ್ರಬುದ್ಧೆ,ಕಾಂಗ್ರೆಸ್ ನಾಯಕರಾದ ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಕಪಿಲ ಸಿಬಲ್ ಅವರು ರುದ್ರಭೂಮಿಯಲ್ಲಿ ಉಪಸ್ಥಿತರಿದ್ದವರಲ್ಲಿ ಸೇರಿದ್ದರು.

ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಬಿಹಾರ ಮತ್ತು ಉತ್ತರಾಖಂಡಗಳ ಮುಖ್ಯಮಂತ್ರಿಗಳಾದ ಅನುಕ್ರಮವಾಗಿ ದೇವೇಂದ್ರ ಫಡ್ನವೀಸ್,ವಿಜಯ ರೂಪಾನಿ,ಬಿ.ಎಸ್.ಯಡಿಯೂರಪ್ಪ,ನಿತೀಶ್ ಕುಮಾರ್ ಮತ್ತು ತ್ರಿವೇಂದ್ರ ಸಿಂಗ್ ರಾವತ್ ಅವರೂ ಉಪಸ್ಥಿತರಿದ್ದರು.

 ರಾಷ್ಟ್ರಧ್ವಜದಲ್ಲಿ ಸುತ್ತಲಾಗಿದ್ದ ಜೇಟ್ಲಿಯವರ ಪಾರ್ಥಿವ ಶರೀರವನ್ನು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಅವರ ಕೈಲಾಷ್ ಕಾಲನಿ ನಿವಾಸದಿಂದ ‘ಜೇಟ್ಲಿ ಅಮರ ರಹೇಂ ’ ಘೋಷಣೆಗಳ ನಡುವೆ ದೀನದಯಾಳ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕೇಂದ್ರಕಚೇರಿಗೆ ತಂದು ಎರಡೂವರೆ ಗಂಟೆಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಉನ್ನತ ನಾಯಕರಿಂದ ಹಿಡಿದು ಶಾಲಾಮಕ್ಕಳು ಸೇರಿದಂತೆ ಜನಸಾಮಾನ್ಯರವರೆಗೆ ಸಾವಿರಾರು ಜನರು ಅಗಲಿದ ನಾಯಕನಿಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಅವರಲ್ಲಿ ಕೆಲವರು ಈ ಸಂದರ್ಭದಲ್ಲಿ ಭಾವೋದ್ವೇಗವನ್ನು ತಡೆಯಲಾಗದೆ ಕಂಬನಿಗಳನ್ನು ಸುರಿಸಿದರು.

“ನಾನು ಪಕ್ಷದ ನಾಯಕರೊಂದಿಗೆ ಅವರ ನಿವಾಸಕ್ಕೆ ಹೋಗುತ್ತಿದ್ದೆ. ಅವರು ಅತ್ಯಂತ ಸಭ್ಯ ಮತ್ತು ಸ್ನೇಹಮಯಿ ವ್ಯಕ್ತಿಯಾಗಿದ್ದು,ನೆರವಿಗಾಗಿ ಪಕ್ಷದ ಕಾರ್ಯಕರ್ತರ ಯಾವುದೇ ಮನವಿಗೂ ಇಲ್ಲ ಎನ್ನುತ್ತಿರಲಿಲ್ಲ” ಎಂದು ಇಲ್ಲಿಯ ಜಾಮಾ ಮಸೀದಿ ಪ್ರದೇಶದ ಬಿಜೆಪಿ ಕಾರ್ಯಕರ್ತ ದಿಲ್ದಾರ್ ಹುಸೇನ್ ಹೇಳಿದರು.

‘ ಅವರು ಶಾಂತ ಸ್ವಭಾವದ ರಾಜಕಾರಣಿಯಾಗಿದ್ದು,ತನ್ನ ಮಾತುಗಳು ಅಥವಾ ಕೃತ್ಯಗಳಿಂದ ಎಂದೂ ಯಾರನ್ನೂ ನೋಯಿಸಿರಲಿಲ್ಲ ’ ಎಂದು ಶ್ರದ್ಧಾಂಜಲಿ ಸಲ್ಲಿಸಲು ಬಿಜೆಪಿ ಕಚೇರಿಯ ಹೊರಗೆ ಕಾಯುತ್ತಿದ್ದ ಜಾರ್ಖಂಡ್ ನ ಬಿಜೆಪಿ ಕಾರ್ಯಕರ್ತ ರಾಜಕಿಶೋರ್ ಹೇಳಿದರು. ಅಲ್ಲಿ ಸೇರಿದ್ದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೂ ಇದೇ ಭಾವನೆಯನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News