ಉಪ್ಪಿನಂಗಡಿ: ಮನೆಗೆ ನುಗ್ಗಿ ನಗ-ನಗದು ಕಳವು

Update: 2019-08-25 13:04 GMT

ಉಪ್ಪಿನಂಗಡಿ: ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ನಗದು ದೋಚಿ ಪರಾರಿಯಾದ ಘಟನೆ ಉಪ್ಪಿನಂಗಡಿ ಬಳಿಯ ಮಠ ಎಂಬಲ್ಲಿ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮನೆಯವರು ಮನೆಯೊಳಗೆ ಮಲಗಿದ್ದಾಗಲೇ ಕಳ್ಳರು ಈ ಕೃತ್ಯ ನಡೆಸಿದ್ದಾರೆ.

ಇಲ್ಲಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಇಟ್ಟಮ ಶೆಟ್ಟಿ ಅವರ ಮನೆಗೆ ಕಳ್ಳರು ನುಗ್ಗಿದ್ದು, ನಾಲ್ಕು ಬಳೆ, ಮುತ್ತಿನ ಮಾಲೆ, ಕರಿಮಣಿ ಸರ, ಪೆಂಡೆಂಟ್, ಒಂದು ಜೊತೆ ಬೆಂಡೋಲೆ, ಉಂಗುರಗಳು ಹಾಗೂ ಮಗುವಿನ ಚಿನ್ನಾಭರಣಗಳು ಸೇರಿದಂತೆ ಸುಮಾರು 15 ಪವನ್ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ. ಇದರೊಂದಿಗೆ 5 ಸಾವಿರ ರೂ. ನಗದನ್ನು ದೋಚಿ, ಪರಾರಿಯಾಗಿದ್ದಾರೆ.

ಕಳವಾದ ಚಿನ್ನಾಭರಣದ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂ.ಗಳಾಗಬಹುದೆಂದು ಅಂದಾಜಿಸಲಾಗಿದೆ. ಮನೆಯವರು ಬೆಳಗ್ಗೆ ಎದ್ದಾಗ ಘಟನೆ ಬೆಳಕಿಗೆ ಬಂದಿದೆ. ಹಿಂಬಾಗಿಲ ಮೂಲಕ ಮನೆಯೊಳಗೆ ಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಇಟ್ಟಮ್ಮ ಶೆಟ್ಟಿ ಅವರು ತನ್ನ ಇನ್ನೊಂದು ಮಗನ ಮನೆಗೆ ತೆರಳಿದ್ದು, ಮಠದ ಅವರ ಮನೆಯಲ್ಲಿ ಅವರ ಪುತ್ರರಾದ ಚಂದ್ರಹಾಸ ಶೆಟ್ಟಿ, ಶ್ರೀನಿವಾಸ ಶೆಟ್ಟಿ ಹಾಗೂ ಚಂದ್ರಹಾಸ ಶೆಟ್ಟಿ ಅವರ ಪತ್ನಿ ಮತ್ತು ಮಗು ಇದ್ದರು.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ, ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News