ಸಿಆರ್‌ಪಿಎಫ್ ದಾಳಿಯಲ್ಲಿ ಮೂರರ ಹರೆಯದ ಬಾಲಕಿ ಮೃತ್ಯು

Update: 2019-08-25 14:47 GMT
ಸಾಂದರ್ಭಿಕ ಚಿತ್ರ

 ರಾಂಚಿ,ಆ.25: ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪಿಯನ್ನು ಬಂಧಿಸಲೆಂದು ಸಿಆರ್‌ಪಿಎಫ್ ಮತ್ತು ಪೊಲೀಸ್ ತಂಡವೊಂದು ಆತನ ಮನೆಯ ಮೇಲೆ ದಾಳಿನಡೆಸಿದಾಗ ಮೂರರ ಹರೆಯದ ಬಾಲಕಿ ಮೃತಪಟ್ಟ ಘಟನೆ ಪಲಾಮು ಜಿಲ್ಲೆಯ ಸತಬರವಾ ಪೊಲೀಸ್ ಠಾಣಾ ವ್ಯಾಪ್ತಿಯ ಬಕೋರಿಯಾ ಗ್ರಾಮದಲ್ಲಿ ನಡೆದಿದೆ.

ಬಕೋರಿಯಾ ನಿವಾಸಿ ವಿನೋದ ಸಿಂಗ್ ಎಂಬಾತ ನಿಷೇಧಿತ ಮಾವೋವಾದಿ ಸಂಘಟನೆ ಜಾರ್ಖಂಡ್ ಜನಮುಕ್ತಿ ಪರಿಷದ್ (ಜೆಜೆಎಂಪಿ)ನೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದ್ದು,ಶುಕ್ರವಾರ ರಾತ್ರಿ ತನ್ನ ಮನೆಗೆ ದಾಳಿ ನಡೆಸಿದ ಭದ್ರತಾ ಸಿಬ್ಬಂದಿಗಳಿಂದ ತಪ್ಪಿಸಿಕೊಳ್ಳಲು ಪೆಟ್ಟಿಗೆಯೊಂದರ ಹಿಂದೆ ಬಚ್ಚಿಟ್ಟುಕೊಂಡಿದ್ದ. ಭದ್ರತಾ ಸಿಬ್ಬಂದಿ ಬಾಗಿಲು ಬಡಿದಾಗ ಸಿಂಗ್ ಪತ್ನಿ ಬಬಿತಾ ದೇವಿ ತನ್ನ ನಾಲ್ವರು ಮಕ್ಕಳೊಂದಿಗೆ ನಿದ್ರಿಸಿದ್ದಳು. ಮನೆಯ ಬಾಗಿಲು ತೆರೆಯದಿದ್ದಾಗ ಭದ್ರತಾ ಸಿಬ್ಬಂದಿ ಕಿಟಕಿಯನ್ನು ಮುರಿದು ಒಳಗೆ ನುಗ್ಗಿದ್ದರು.

“ನನ್ನ ಪತಿ ಎಲ್ಲಿದ್ದಾನೆಂದು ನನಗೆ ಗೊತ್ತಿಲ್ಲ ಎಂದು ನಾನು ತಿಳಿಸಿದಾಗ ಅವರು ಮೂರು ವರ್ಷದ ಪುತ್ರಿಯನ್ನು ಹಾಸಿಗೆಯಿಂದ ಎಳೆದು ಎರಡು ಬಾರಿ ನೆಲಕ್ಕೆ ಅಪ್ಪಳಿಸಿದ್ದರು.

ನಾನು ಮಗುವನ್ನು ಎತ್ತಿಕೊಂಡಾಗ ಅದಾಗಲೇ ಮೃತಪಟ್ಟಿತ್ತು “ಎಂದು ಬಬಿತಾ ದೇವಿ ಹೇಳಿದರು. “ಆಕೆ ಸಿಆರ್‌ಪಿಎಫ್ ಸಿಬ್ಬಂದಿಗಳತ್ತ ಕೂಗಾಡಿದಾಗ ಆಕೆಯನ್ನು ಮೌನವಾಗಿರುವಂತೆ ತಿಳಿಸಿ ಅವರು ಆರೋಪಿಸಿದರು.

ಮಗುವಿನ ಆಕ್ರಂದನ ನನಗೆ ಕೇಳಿಸಿತ್ತು. ಆದರೆ ಹೊರಗೆ ಬರಲು ಧೈರ್ಯವಿರಲಿಲ್ಲ. ಭದ್ರತಾ ಸಿಬ್ಬಂದಿಗಳು ತೆರಳಿದ ಬಳಿಕ ಅಡಗಿಕೊಂಡಿದ್ದ ಜಾಗದಿಂದ ಹೊರಗೆ ಬಂದು ನೋಡಿದಾಗ ನನ್ನ ಮಗಳು ಸತ್ತು ಹೋಗಿದ್ದಳು” ಎಂದು ಸಿಂಗ್ ಆರೋಪಿಸಿದ್ದಾನೆ. ಪೊಲೀಸರು ತನ್ನನ್ನು ಏತಕ್ಕಾಗಿ ಹುಡುಕುತ್ತಿದ್ದರು ಎನ್ನುವುದು ತನಗೆ ಗೊತ್ತಿಲ್ಲ ಎಂದೂ ಆತ ತಿಳಿಸಿದ.

ಸಿಆರ್‌ಪಿಎಫ್ ಸಿಬ್ಬಂದಿಗಳ ವಿರುದ್ಧ ಬಬಿತಾ ದೇವಿಯ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಸಿಂಗ್ ಜೆಜೆಎಂಪಿಯೊಂದಿಗೆ ನಂಟು ಹೊಂದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ ಸಮಗ್ರ ತನಿಖೆ ನಡೆಯದೆ ಅದನ್ನು ದೃಢಪಡಿಸುವಂತಿಲ್ಲ ಎಂದು ಹೇಳಿದ ಪಲಾಮು ಎಸ್‌ಪಿ ಅಜಯ ಲಿಂಡಾ ಅವರು, ಘಟನೆಯಲ್ಲಿ ರಾಜ್ಯ ಪೊಲೀಸರ ಪಾತ್ರವನ್ನು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News