ರಾಜ್ಯ ಅಂತರ ಜಿಲ್ಲಾ ಕಿರಿಯರ ಕ್ರೀಡಾಕೂಟ: ಬೆಂಗಳೂರು ನಗರ ಜಿಲ್ಲೆಗೆ ಚಾಂಪಿಯನ್ ಪ್ರಶಸ್ತಿ

Update: 2019-08-25 16:00 GMT

ಉಡುಪಿ, ಆ.25: ಉಡುಪಿ ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಸಂಸ್ಥೆಯ ವತಿಯಿಂದ ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಮೂರು ದಿನಗಳ ಕರ್ನಾಟಕ ರಾಜ್ಯ ಅಂತರ ಜಿಲ್ಲಾ ಕಿರಿಯರ ಕ್ರೀಡಾಕೂಟದಲ್ಲಿ ಬೆಂಗಳೂರು ನಗರ ಜಿಲ್ಲೆ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದೆ.

14, 16, 18 ಮತ್ತು 20ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿ ಯರ ಎಲ್ಲ ವಿಭಾಗಗಳಲ್ಲಿಯೂ ಬೆಂಗಳೂರು ನಗರ ಜಿಲ್ಲೆ, ತಂಡ ಪ್ರಶಸ್ತಿ ಯನ್ನು ಪಡೆಯುವ ಮೂಲಕ ಒಟ್ಟು 364 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಯನ್ನು ತನ್ನಾಗಿಸಿಕೊಂಡಿತು.

ವೈಯಕ್ತಿಕ ಪ್ರಶಸ್ತಿಯನ್ನು 14ರ ಬಾಲಕರ ವಿಭಾಗದಲ್ಲಿ ಬೆಂಗಳೂರು ನಗರದ ಮುತ್ತಣ್ಣ ಮತ್ತು ಬಾಲಕಿಯರ ವಿಭಾಗದಲ್ಲಿ ಪವನ ನಾಗರಾಜ್, 16ರ ಬಾಲಕರ ವಿಭಾಗದಲ್ಲಿ ದ.ಕ. ಜಿಲ್ಲೆಯ ನೀಲ್ ಆರ್.ಕುಂದರ್ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ಶೈಲಿ ಸಿಂಗ್, 18ರ ಬಾಲಕರ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ಶಶಿಕಾಂತ್ ಮತ್ತು ಬಾಲಕಿಯರ ವಿಭಾಗದಲ್ಲಿ ಅದೇ ಜಿಲ್ಲೆಯ ಪ್ರಿಯ ಮೋಹನ್, 20ರ ಬಾಲಕರ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಅಭಿನ್ ದೇವಾಡಿಗ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ಕಾವೇರಿ ಎಲ್.ಪಟೇಲ್ ಪಡೆದು ಕೊಂಡರು.

ರವಿವಾರ ನಿಟ್ಟೆ ಎನ್‌ಎಂಎಎಂಐಟಿಯ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಕರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪಿಎಚ್‌ಡಿ ಪದವಿ ಪಡೆದ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ರಾಮಚಂದ್ರ ಪಾಟ್ಕರ್ ಹಾಗೂ ದೀಪಕ್ ರಾಮ್ ಬಾರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕಾರ್ಕಳ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಚ್.ಟಿ. ಮಹದೇವ್, ಕಾರ್ಯದರ್ಶಿ ರಾಜವೇಲು, ಅಂತಾರಾಷ್ಟ್ರೀಯ ಅಥ್ಲೆಟ್ಸ್ ಅಶ್ವಿನಿ ಅಕ್ಕುಂಜೆ ಭಾಗವಹಿಸಿದ್ದರು.

ಕ್ರೀಡಾಕೂಟ ಸಂಘಟನಾ ಸಮಿತಿಯ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್, ಜಿಪಂ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷ ರಘುರಾಮ ನಾಯಕ್, ಸಮಿತಿಯ ಸಂಘಟನಾ ಕಾರ್ಯದರ್ಶಿ ಮಹೇಶ್ ಠಾಕೂರ್, ಡಾ.ಎಚ್.ವಿ.ಕೆಂಪರಾಜ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಂಸ್ಥೆಯ ಕಾರ್ಯ ದರ್ಶಿ ದಿನೇಶ್ ಕುಮಾರ್ ವಂದಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News