ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸರಕಾರ ವಹಿಸಲಿ: ಪಲಿಮಾರು ಶ್ರೀ

Update: 2019-08-25 16:20 GMT

 ಉಡುಪಿ, ಆ.25: ಬೇರೆ ರಾಷ್ಟ್ರಗಳಂತೆ ಭಾರತದಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಇವುಗಳ ಜಂಟಿ ಆಶ್ರಯ ದಲ್ಲಿ ರವಿವಾರ ರಾಜಾಂಗಣದಲ್ಲಿ ಆಯೋಜಿಸಲಾದ ವಿನಮ್ರ ಸಹಾಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿ ಅವರು ಮಾತನಾಡುತಿದ್ದರು.

ಈ ದೇಶಕ್ಕೆ ರೈತರು, ಯೋಧರಂತೆ ವಿದ್ಯಾರ್ಥಿಗಳು ಕೂಡ ಅತ್ಯಂತ ಮುಖ್ಯ. ವಿದ್ಯಾರ್ಥಿಗಳಿಂದಲೇ ಈ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಆದುದರಿಂದ ಮಕ್ಕಳಿಗೆ ವಿದ್ಯೆ ಕೊಡುವ ಕೆಲಸವನ್ನು ಸರಕಾರ ಮಾಡಬೇಕು. ಅದು ಸಾಧ್ಯ ಇಲ್ಲದ್ದರೆ ಮಕ್ಕಳ ಶಿಕ್ಷಣ ಸಾಲವನ್ನು ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸರಕಾರಿ ಶಾಲೆಗಳನ್ನು ಉನ್ನತ ಸ್ಥಿತಿಗೆ ತಂದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತೆ ಮಾಡಬೇಕು. ಆ ಮೂಲಕ ಪ್ರತಿಯೊಬ್ಬರು ಸರಕಾರಿ ಶಾಲೆಯಲ್ಲೇ ಕಲಿಯುವಂತೆ ಮಾಡಬೇಕಾಗಿದೆ. ಮುಂದೆ ಪೋಷಕರು ಸರಕಾರಿ ಕೆಲಸಕ್ಕೆ ಮಾತ್ರವಲ್ಲ, ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಲಿ್ಲಯೂ ಆಸಕ್ತಿ ವಹಿಸಬೇಕು ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಸಾಲ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ. ಶಿಕ್ಷಣ ಪಡೆದ ಮಕ್ಕಳಿಗೆ ಉದ್ಯೋಗ ಸಿಗದೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಆದುದರಿಂದ ಈ ಯುವಜನತೆಯ ಸಾಲವನ್ನು ಮನ್ನಾ ಮಾಡಬೇಕು ಎಂದರು.

ಅಧ್ಯಕ್ಷತೆಯನ್ನು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕಕ್ ವಹಿಸಿದ್ದರು. ಕರ್ನಾಟಕ ಬ್ಯಾಂಕಿನ ಮಹಾಪ್ರಬಂಧಕ ಕೆ.ಮಹಾ ಲಿಂಗೇಶ್ವರ, ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಹರಿಶ್ಚಂದ್ರ, ಉದ್ಯಮಿಗಳಾದ ಆನಂದ ಸಿ.ಕುಂದರ್, ತಲ್ಲೂರು ಶಿವರಾಮ ಶೆಟ್ಟಿ, ವಿ.ಜಿ. ಶೆಟ್ಟಿ, ಭುವನೇಂದ್ರ ಕಿದಿಯೂರು, ಪುರುಷೋತ್ತಮ ಪಟೇಲ್, ಯು.ವಿಶ್ವನಾಥ ಶೆಣೈ, ಆನಂದ ಪಿ.ಸುವರ್ಣ, ಹರಿಯಪ್ಪ ಕೋಟ್ಯಾನ್, ಸಾಧು ಸಾಲಿಯಾನ್, ಯಕ್ಷಗಾನ ಕಲಾರಂಗದ ಉಪಾ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 1150 ವಿದ್ಯಾರ್ಥಿಗಳಿಗೆ 85 ಲಕ್ಷ ರೂ. ಮೊತ್ತದ ಸಹಾಯಧನವನ್ನು ವಿತರಿಸಲಾಯಿತು. ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ ದರು. ಉಪಾ್ಯಕ್ಷ ಗಂಗಾಧರ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News