‘ಶೇಣಿ ಗೋಪಾಲಕೃಷ್ಣ ಭಟ್ ನೆನಪಿನ ಕಾರ್ಯ ಸ್ತುತ್ಯರ್ಹ’

Update: 2019-08-25 16:25 GMT

ಮಂಗಳೂರು, ಆ.25: ನಮ್ಮ ನೆಲದ ಸತ್ಯದರ್ಶನ ಮಾಡಿಸುವ ಹಲವು ಬೌದ್ಧಿಕ ಆಯಾಮಗಳಲ್ಲಿ ಯಕ್ಷಗಾನವೂ ಒಂದು. ಇಂತಹ ಉನ್ನತ ಕಲೆಯಾದ ಯಕ್ಷಗಾನದ ಶ್ರೇಷ್ಠ ಅರ್ಥಧಾರಿಯಾಗಿ ದಶಕಗಳ ಕಾಲ ಮೆರೆದ ಶೇಣಿ ಗೋಪಾಲಕೃಷ್ಣ ಭಟ್ ಅವರ ನೆನಪಿನ ಕಾರ್ಯ ಸ್ತುತ್ಯರ್ಹ ಎಂದು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಪ್ರಾಂಶುಪಾಲ ಡಾ. ಉದಯಕುಮಾರ್ ಹೇಳಿದರು.

ಸುರತ್ಕಲ್‌ನ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ರವಿವಾರ ನಡೆದ ‘ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭ 2019’ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಯಲ್ಲಿ ವಿಶ್ವವಿದ್ಯಾಲಯಕ್ಕೆ ಹೋಗದವರು ಹಲವರು ಇರಬಹುದು. ಆದರೆ, ಯಕ್ಷಗಾನ ಎಂಬ ವಿಶ್ವವಿದ್ಯಾಲಯದಲ್ಲಿ ಹೆಸರು ನೋಂದಾಯಿಸದೇ ಇರುವವರು ಯಾರೂ ಇರಲಾರರು. ಎಲ್ಲರೂ ಯಕ್ಷಗಾನ ವೀಕ್ಷಿಸಿರುತ್ತಾರೆ. ರಂಗಭೂಮಿ ಸಮಾಜದ ಜತೆಗೆ ಮಾತುಕತೆ ನಡೆಸುತ್ತದೆ. ಯಕ್ಷಗಾನವೂ ಈ ಕೆಲಸ ಮಾಡುತ್ತದೆ. ಆ ಮೂಲಕ ಯಕ್ಷಗಾನದಿಂದ ಸಮಾಜ ಸುಸಂಸ್ಕೃತವಾಗುತ್ತಿದೆ ಎಂದರು.

ಯಕ್ಷಗಾನ ಪ್ರಸಂತಕರ್ತ ಹಾಗೂ ಹಿಮ್ಮೇಳ ಗುರು ಗಣೇಶ ಕೊಲೆಕಾಡಿ, ಟ್ರಸ್ಟ್ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ, ಕೋಶಾಧಿಕಾರಿ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಪಿ.ವಿ. ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಳಿಕ ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರ ಅಧ್ಯಕ್ಷತೆಯಲ್ಲಿ ‘ಶೇಣಿ ಅರ್ಥ ಶ್ರೇಣಿ’ ವಿಚಾರಗೋಷ್ಠಿ ನಡೆಯಿತು. ಹಿರಿಯ ಯಕ್ಷಗಾನ ಅರ್ಥಧಾರಿ ಶಾಂತಾರಾಮ ಪ್ರಭು ನಿಟ್ಟೂರು, ಹಿರಿಯ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ, ನಿವೃತ್ತ ಉಪನ್ಯಾಸಕ ಡಾ. ಜಿ.ಎಲ್. ಹೆಗಡೆ ಕುಮಟಾ, ಹಿರಿಯ ಕಲಾ ವಿಮರ್ಶಕ ಡಾ.ಕೆ.ಪಿ. ಭಟ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಹಿರಿಯ ವಿಮರ್ಶಕ ಕೆ.ಎಲ್. ಕುಂಡಂತಾಯ ನಿರೂಪಿಸಿದರು.

ಗಣೇಶ ಕೊಲೆಕಾಡಿ ಶಿಷ್ಯರಿಂದ ಪ್ರಾತ್ಯಕ್ಷಿಕೆ

ಕಾರ್ಯಕ್ರಮದ ಅಂಗವಾಗಿ ಪ್ರಸಂಗಕರ್ತ, ಹಿಮ್ಮೇಳಗುರು ಗಣೇಶ ಕೊಲೆಕಾಡಿ ಅವರ ನಿರ್ದೇಶನದಲ್ಲಿ ‘ಭಾಗವತಿಕೆಯಲ್ಲಿ ಪಾರಂಪರಿಕ ಮಟ್ಟುಗಳ ಪ್ರಾತ್ಯಕ್ಷಿಕೆ’ ನಡೆಯಿತು. ಭಾಗವತರಾಗಿ ಅಂಡಾಲ ದೇವಿಪ್ರಸಾದ ಶೆಟ್ಟಿ, ಭವ್ಯಶ್ರೀ ಕುಲ್ಕುಂದ, ದೇವರಾಜ ಆಚಾರ್ಯ, ಚೇತನ್ ಸಚ್ಚರಿಪೇಟೆ, ಗುರುರಾಜ ಉಪಾಧ್ಯಾಯ ಭಾಗವಹಿಸಿದ್ದರು.

ಮದ್ದಳೆಯಲ್ಲಿ ಮುರಳೀಧರ ಭಟ್ ಕಟೀಲು, ಯಜ್ಞೇಶ ರೈ ಕಟೀಲು, ಚೆಂಡೆಯಲ್ಲಿ ಸವಿನಯ ನೆಲ್ಲಿತೀರ್ಥ ಸಹಕರಿಸಿದರು. ಅಂಡಾಲ ದೇವಿಪ್ರಸಾದ ಶೆಟ್ಟಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News