ಜಮ್ಮು ಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆ ರದ್ದಾದರೆ ಆಗಲಿ: ರಾಜ್ಯಪಾಲ ಸತ್ಯಪಾಲ್ ಮಲಿಕ್

Update: 2019-08-25 16:33 GMT

ಹೊಸದಿಲ್ಲಿ, ಆ.25: ಜಮ್ಮು ಕಾಶ್ಮೀರದಲ್ಲಿ ಅಮಾಯಕರ ಜೀವಹಾನಿ ಆಗಬಾರದು ಎಂಬ ನೀತಿ ಸರಕಾರದ್ದಾಗಿದೆ. ಸಂವಹನ ವ್ಯವಸ್ಥೆ ರದ್ದು ಅಥವಾ ಮನುಷ್ಯರ ಜೀವ ಹಾನಿ ಈ ಎರಡರಲ್ಲಿ ಸಂವಹನ ವ್ಯವಸ್ಥೆ ರದ್ದು ಆಯ್ಕೆಗೇ ಆದ್ಯತೆ ನೀಡುತ್ತೇವೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

 ಈ ಹಿಂದಿನ ಸ್ಥಿತಿ ಇದ್ದಿದ್ದರೆ ಜಮ್ಮು ಕಾಶ್ಮೀರದಲ್ಲಿ ತಿಂಗಳ ಪ್ರಥಮ ವಾರದಲ್ಲೇ ಕನಿಷ್ಟ 50 ಮಂದಿಯ ಹತ್ಯೆಯಾಗುತ್ತಿತ್ತು. ಆದರೆ 370ನೇ ವಿಧಿ ರದ್ದಾದ ಬಳಿಕ ಕೈಗೊಂಡ ಮುಂಜಾಗರೂಕತಾ ಕ್ರಮದಿಂದಾಗಿ ಸುಮಾರು 3 ವಾರದಲ್ಲಿ ಒಂದೇ ಒಂದು ಪ್ರಾಣಹಾನಿಯ ಘಟನೆ ವರದಿಯಾಗಿಲ್ಲ. “10 ದಿನ ಫೋನ್ ಇಲ್ಲದಿದ್ದರೆ ಏನೂ ಸಮಸ್ಯೆ ಇಲ್ಲ. ಸಂವಹನ ವ್ಯವಸ್ಥೆ ರದ್ದಾದರೆ ಏನಾಯಿತು, ಜನರ ಪ್ರಾಣ ಅಮೂಲ್ಯವಾದುದು. ಅದನ್ನು ಸರಕಾರ ಉಳಿಸಿದೆ ಮತ್ತು ಇನ್ನು ಮುಂದೆಯೂ ಜನರ ಜೀವ ಉಳಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ" ಎಂದು ಮಲಿಕ್ ಹೇಳಿದ್ದಾರೆ.

ಮೂರು ವಾರದ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಜಾಗರೂಕತಾ ಕ್ರಮವಾಗಿ ಇಂಟರ್‌ನೆಟ್ ಸಂಪರ್ಕ ಮತ್ತು ದೂರವಾಣಿ ಸಂಪರ್ಕವನ್ನು ಕೇಂದ್ರ ಸರಕಾರ ಕಡಿತಗೊಳಿಸಿತ್ತು. ಹಂತ ಹಂತವಾಗಿ ಸಂವಹನ ವ್ಯವಸ್ಥೆಯನ್ನು ಮರುಸ್ಥಾಪಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ 97 ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಕೇವಲ 25 ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

 ರಾಜ್ಯದಲ್ಲಿ ಪರಿಸ್ಥಿತಿ ಕ್ರಮೇಣ ಸಹಜತೆಯತ್ತ ಮರಳುತ್ತಿದೆ. ಅವಶ್ಯಕ ವಸ್ತು ಮತ್ತು ಔಷಧಿಗಳ ಕೊರತೆಯಿಲ್ಲ. ಈದ್ ಹಬ್ಬದ ಸಂದರ್ಭದಲ್ಲಿ ನಾವು ಜನರ ಮನೆಗೇ ಮಾಂಸ, ತರಕಾರಿ ಮತ್ತು ಮೊಟ್ಟೆಗಳನ್ನು ಪೂರೈಸಿದ್ದೇವೆ. ರಾಜ್ಯದ ಕುರಿತ ನಿಮ್ಮ ಅಭಿಪ್ರಾಯ ಮುಂದಿನ 15 ದಿನದೊಳಗೆ ಬದಲಾಗಲಿದೆ ಎಂದು ಮಲಿಕ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News