ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್‍ನ ಮಹಾಸಭೆ

Update: 2019-08-25 16:55 GMT

ಪುತ್ತೂರು: ಪುತ್ತೂರು ಕೋ-ಓಪರೇಟ್ ಟೌನ್ ಬ್ಯಾಂಕ್ 2018-19ನೇ ಸಾಲಿನಲ್ಲಿ 62,38,536.18 ರೂ. ಲಾಭ ಗಳಿಸಿದ್ದು,  ಬ್ಯಾಂಕ್ ಈ ಸಾಲಿನಲ್ಲಿಯೂ ಸದಸ್ಯರಿಗೆ ಶೇ. 12ರಷ್ಟು ಡಿವೆಡೆಂಟ್ ನೀಡಲು ನಿರ್ಧರಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷರಾದ ನ್ಯಾಯವಾದಿ ಎನ್. ಕಿಶೋರ್ ಕೊಳತ್ತಾಯ ತಿಳಿಸಿದರು.

ಅವರು ರವಿವಾರ ನಡೆದ ಬ್ಯಾಂಕ್‍ನ ಮಹಾಸಭೆಯಲ್ಲಿ 2018-19ನೇ ಸಾಲಿನಲ್ಲಿ ಬ್ಯಾಂಕ್ ನಡೆಸಿದ ವ್ಯವಹಾರಗಳ ಮಾಹಿತಿ ನೀಡುತ್ತಾ ಬ್ಯಾಂಕ್ ಆರ್ಥಿಕ ಲಾಭದ ಇತಿಹಾಸವನ್ನು ಮುಂದುವರಿಸಿದೆ. ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿವೆ. ಅಡಿಟ್ ವರ್ಗೀಕರಣದಲ್ಲಿ ಈ ಬಾರಿಯೂ ಬ್ಯಾಂಕ್ "ಎ" ತರಗತಿಯನ್ನು ಪಡೆದಿದೆ ಎಂದರು.

ಕಾರ್ಯ ಯೋಜನೆಬ್ಯಾಂಕ್ ತನ್ನ ಶಾಖೆ ತೆರೆಯುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಈ ವರ್ಷವೂ ಪ್ರಸ್ತಾವನೆ ಸಲ್ಲಿಸಲಿದೆ. ಶಾಖೆಯನ್ನು ತೆರೆಯುವ ಮೂಲಕ ಆರ್ಥಿಕ ಮತ್ತು ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ ಎಂದು ಹೇಳಿದ ಕೊಳತ್ತಾಯ ಬ್ಯಾಂಕ್ ರೂ. 62.22ಕೋಟಿ ದುಡಿಯುವ ಬಂಡವಾಳ, ರೂ. 58.81ಕೋಟಿ ಠೇವಣಿಗಳು ಹೊಂದಿದೆ. ರೂ. 29.72ಕೋಟಿ ಹೂಡಿಕೆಯನ್ನು ಬ್ಯಾಂಕ್ ಮಾಡಿದೆ. ಒಟ್ಟು ರೂ. 33.34ಕೋಟಿ ಸಾಲ ವಿತರಿಸಿದೆ ಎಂದರು.

ಕಳೆದ 110 ವರ್ಷಗಳಿಂದಲೂ ಲಾಭ ಗಳಿಸುತ್ತಾ ಬಂದಿರುವ ಬ್ಯಾಂಕ್ ಈ ಸಾಲಿನಲ್ಲಿಯೂ ಸದಸ್ಯರಿಗೆ ಶೇ. 12ರಷ್ಟು ಡಿವೆಡೆಂಟ್ ಅಥವಾ ಲಾಭಾಂಶವನ್ನು ನೀಡಲು ನಿರ್ಧರಿಸಿದೆ. ಬ್ಯಾಂಕ್‍ನಲ್ಲಿ ಒಟ್ಟು 7,231 ಸದಸ್ಯರು ಇದ್ದು ರೂ. 247.34ಲಕ್ಷ ಮೊತ್ತದಷ್ಟು ಸದಸ್ಯರ ಪಾಲು ಬಂಡವಾಳವನ್ನು ಹೊಂದಿದೆ. ಬ್ಯಾಂಕ್‍ನ ಠೇವಣಿದಾರರ ಠೇವಣಿಗಳಿಗೆ ವಿಮಾ ಸೌಲಭ್ಯವನ್ನು ಬ್ಯಾಂಕ್ ನೀಡುತ್ತಿದೆ. ಪುತ್ತೂರು ನಗರದ ಹೃದಯ ಭಾಗದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ಜನಪರ ಕಾಳಜಿ ಇರುವ ಅಗ್ರಗಣ್ಯ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕೊಳತ್ತಾಯ ತಿಳಿಸಿದರು.

ಬ್ಯಾಂಕ್ ಪ್ರತೀ ವರ್ಷ ತನ್ನ ಹಿರಿಯ ಸದಸ್ಯರನ್ನು ಸನ್ಮಾನಿಸುವ ಸದ್ ಪರಂಪರೆಯನ್ನು ಹೊಂದಿದ್ದು ಈ ವರ್ಷ ಹಿರಿಯ ಸದಸ್ಯರಾದ ಮೇರಿ ಮಾಡ್ತಾ, ಸುಮಿತ್ರಾ ಪಿ., ಎಲ್ಯಣ್ಣ ಗೌಡ ಎಂ., ಭಾಸ್ಕರ ಯು., ವಿಶ್ವನಾಥ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್‍ನ ಮಹಾಪ್ರಬಂಧಕ ನಹುಷ ಪಿ.ವಿ. ಬ್ಯಾಂಕ್‍ನ ಆರ್ಥಿಕ ಚಟುವಟಿಕೆಗಳ ಕುರಿತು ವಾರ್ಷಿಕ ವರದಿ ಮಂಡಿಸಿದರು. 

ಈ ಸಂದರ್ಭ ಬ್ಯಾಂಕ್‍ನ ನಿರ್ದೇಶಕರಾದ ಕೆ. ಅಚ್ಚುತ ಪ್ರಭು, ಪಿ. ಸದಾಶಿವ ಪೈ, ಅನಂತರಾಮ ಟಿ.ಕೆ., ಕೃಷ್ಣನಾರಾಯಣ ಮುಳಿಯ, ಪಾಂಡುರಂಗ ಹೆಗ್ಡೆ, ಜಯಂತಿ ನಾಯಕ್, ಮೋಹಿನಿ ಟಿ. ನಾಯ್ಕ, ಹೇಮಾವತಿ, ಅರವಿಂದ ಕೃಷ್ಣ ಉಪಸ್ಥಿತರಿದ್ದರು. ಬ್ಯಾಂಕ್‍ನ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ ಸ್ವಾಗತಿಸಿ, ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News