ಅ.2ರಿಂದ ಪ್ಲಾಸ್ಟಿಕ್ ವಿರುದ್ಧ ಸಾಮೂಹಿಕ ಅಭಿಯಾನ: ‘ಮನ್ ಕೀ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ

Update: 2019-08-25 17:14 GMT

ಹೊಸದಿಲ್ಲಿ, ಆ.25: ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ ಅಕ್ಟೋಬರ್ 2ರಿಂದ ಭಾರತವನ್ನು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಸಾಮೂಹಿಕ ಅಭಿಯಾನವನ್ನು ಆರಂಭಿಸುವಂತೆ ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.

 ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಅನ್ನು ವಿರೋಧಿಸಿ ಹೊಸ ಸಾಮೂಹಿಕ ಚಳವಳಿ ಆರಂಭಿಸಬೇಕು. ಈ ದೀಪಾವಳಿಗೆ ಮೊದಲು ಪ್ಲಾಸ್ಟಿಕ್ ತ್ಯಾಜ್ಯಗಳ ಸುರಕ್ಷಿತ ವಿಲೇವಾರಿಗೆ ನಗರಪಾಲಿಕೆಗಳು, ಜಿಲ್ಲಾಡಳಿತ, ಗ್ರಾಮಪಂಚಾಯತ್‌ಗಳು, ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ವಲಯಗಳು ಕೈಜೋಡಿಸಬೇಕು ಎಂದು ಮೋದಿ ಕರೆ ನೀಡಿದರು.

ಸೆ.11ರಿಂದ ಆರಂಭವಾಗುವ ‘ಸ್ವಚ್ಛತೆಯೇ ಸೇವೆ’ ಎಂಬ ವಾರ್ಷಿಕ ಕಾರ್ಯಕ್ರಮದಲ್ಲಿ ಸ್ವಪ್ರೇರಣೆಯಿಂದ ಪಾಲ್ಗೊಳ್ಳುವಂತೆ ಜನರನ್ನು ವಿನಂತಿಸಿದ ಅವರು, ಅಕ್ಟೋಬರ್ 2ರಂದು ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಸಂದರ್ಭ ದೇಶವನ್ನು ಬಯಲುಶೌಚ ಮುಕ್ತಗೊಳಿಸುವ ಜೊತೆಗೆ ಪ್ಲಾಸ್ಟಿಕ್ ವಿರುದ್ಧವೂ ಹೊಸ ಆಂದೋಲನ ಆರಂಭವಾಗಬೇಕು ಎಂದರು.

 ಪರಿಸರದ ರಕ್ಷಣೆಗಾಗಿ ಪ್ಲಾಸ್ಟಿಕ್ ವಸ್ತುಗಳ ಸಮರ್ಪಕ ಸಂಗ್ರಹ ಮತ್ತು ದಾಸ್ತಾನು ಮಾಡುವುದಕ್ಕೆ ಸರಕಾರ ಆದ್ಯತೆ ನೀಡಲಿದೆ. ಈ ಕಾರ್ಯಕ್ಕೆ ಬೇಕಿರುವುದು ಜನರ ದೃಢ ಸಂಕಲ್ಪ ಮಾತ್ರ. ಇಲ್ಲಿ ಗಾಂಧೀಜಿಯವರಿಗಿಂತ ಹೆಚ್ಚಿನ ಸ್ಫೂರ್ತಿಯ ಅಗತ್ಯವಿದೆಯೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. ಫಿಟ್ ಇಂಡಿಯಾ ಅಭಿಯಾನಕ್ಕೆ ಆಗಸ್ಟ್ 29ರಂದು ಚಾಲನೆ ನೀಡಲಾಗುವುದು. ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು ಎಲ್ಲರಿಗೂ ಆಸಕ್ತಿ ಇರುವ ಅಭಿಯಾನ ಇದಾಗಲಿದೆ ಎಂದು ಪ್ರಧಾನಿ ಹೇಳಿದರು.

 ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಮಾಡಿದ ಭಾಷಣದಲ್ಲೂ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಮತ್ತು ಅಂಗಡಿಯವರು ಗ್ರಾಹಕರಿಗೆ ಪರಿಸರಸ್ನೇಹಿ ಚೀಲಗಳನ್ನು ಒದಗಿಸುವಂತೆ ಮೋದಿ ಜನತೆಗೆ ಕಿವಿ ಮಾತು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News