ಕೆಫೆ ಕಾಫಿ ಡೇ ಮಾಲಕ ಸಿದ್ಧಾರ್ಥ ಆತ್ಮಹತ್ಯೆ: ಎಫ್‌ಎಸ್‌ಎಲ್ ವರದಿಯಲ್ಲಿ ಉಲ್ಲೇಖ

Update: 2019-08-25 17:28 GMT

ಮಂಗಳೂರು, ಆ.25: ಕೆಫೆ ಕಾಫಿ ಡೇ ಮಾಲಕ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ ಅವರದ್ದು ‘ಆತ್ಮಹತ್ಯೆ’ ಎಂದು ಪ್ರಕರಣದ ತನಿಖಾಧಿಕಾರಿಗೆ ಸಲ್ಲಿಸಿದ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಸಿದ್ಧಾರ್ಥ ಸಾವಿನ ಕುರಿತ ಗೊಂದಲಕ್ಕೆ ತೆರೆಬಿದ್ದಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ಫೋರೇನ್ಸಿಕ್ ತಜ್ಞರ ಕೈಗೆ ವರದಿಯು ಕಳೆದ ಆ.16ರಂದು ಸೇರಿತ್ತು. ಬಳಿಕ ಅವರು ಅಂತಿಮ ವರದಿಯನ್ನು ಪ್ರಕರಣದ ತನಿಖಾಧಿಕಾರಿಗೆ ಶುಕ್ರವಾರ ಸಲ್ಲಿಸಿದ್ದರು ಎಂದು ಖಚಿತ ಮೂಲಗಳು ತಿಳಿಸಿವೆ.

ಬೆಂಗಳೂರಿನಿಂದ ‘ಇನ್ನೋವಾ’ ಕಾರಿನಲ್ಲಿ ಬಂದಿದ್ದ ಉದ್ಯಮಿ ಸಿದ್ಧಾರ್ಥ ಜು.29ರಂದು ಸಂಜೆ 7 ಗಂಟೆಯಿಂದ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದರು. ಜು.31ರಂದು ಬೆಳಗ್ಗೆ ಅವರ ಶವ ಹೊಯ್ಗೆ ಬಝಾರ್ ಸಮೀಪ ಪತ್ತೆಯಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿದ್ಧಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಜು.31ರಂದು ಬೆಳಗ್ಗೆ ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿತ್ತು. ಕೆಎಂಸಿ ಆಸ್ಪತ್ರೆಯ ಫೊರೇನ್ಸಿಕ್ ತಜ್ಞ ಡಾ.ಪ್ರತೀಕ್ ರಸ್ತೋಗಿ ಹಾಗೂ ವೆನ್ಲಾಕ್ ಆಸ್ಪತ್ರೆಯ ಫೊರೇನ್ಸಿಕ್ ವಿಭಾಗದ ಡಾ.ಕೆ.ಎಸ್.ರಶ್ಮಿ ನೆರವೇರಿಸಿದ್ದರು.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪರೀಕ್ಷಾ ವರದಿಯನ್ನು ಹೆಚ್ಚಿನ ಪರೀಕ್ಷೆಗೆ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಮಧ್ಯೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಹಂತದ ವರದಿ ಪ್ರಕರಣದ ತನಿಖಾಧಿಕಾರಿಗೆ ಸಲ್ಲಿಕೆಯಾಗಿದ್ದು, ಅದರಲ್ಲಿ ‘ನೀರಿಗೆ ಬಿದ್ದು ಉಸಿರುಗಟ್ಟಿ ಸಾವು’ ಎಂದು ಉಲ್ಲೇಖಿಸಲಾಗಿತ್ತು.

ಈಗಾಗಲೇ ಮರಣೋತ್ತರ ಪರೀಕ್ಷಾ ವರದಿ ಕೂಡ ತನಿಖಾಧಿಕಾರಿಗೆ ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ವರದಿಯಲ್ಲಿ ಸಿದ್ಧಾರ್ಥ ಅವರ ಸಾವು ‘ಆತ್ಮಹತ್ಯೆ’ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News