ಜಮ್ಮು ಕಾಶ್ಮೀರದ ನಾಗರಿಕ ಕಾರ್ಯಾಲಯದ ಕಟ್ಟಡದಲ್ಲಿ ರಾಷ್ಟ್ರ ಧ್ವಜಾರೋಹಣ

Update: 2019-08-25 18:08 GMT

ಶ್ರೀನಗರ, ಆ. 25: ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ದಿನಗಳ ಬಳಿಕ ರವಿವಾರ ಶ್ರೀನಗರದಲ್ಲಿರುವ ನಾಗರಿಕ ಕಾರ್ಯಾಲಯದ ಕಟ್ಟಡದಲ್ಲಿದ್ದ ರಾಜ್ಯ ಧ್ವಜವನ್ನು ಅವರೋಹಣ ಮಾಡಲಾಗಿದೆ ಹಾಗೂ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಲಾಗಿದೆ.

ಈ ಹಿಂದೆ ಜಮ್ಮು ಹಾಗೂ ಕಾಶ್ಮೀರ ಎರಡು ಧ್ವಜಗಳಾದ ರಾಷ್ಟ್ರ ಧ್ವಜ ಹಾಗೂ ರಾಜ್ಯ ಧ್ವಜವನ್ನು ಹಾರಿಸುವ ಸ್ವಾತಂತ್ರ ಹೊಂದಿತ್ತು. ರಾಷ್ಟ್ರ ಧ್ವಜದೊಂದಿಗೆ ಕಾಶ್ಮೀರ ಕಣಿವೆ, ಜಮ್ಮು ಹಾಗೂ ಲಡಾಖ್ ಎಂಬ ಮೂರು ವಲಯವನ್ನು ಪ್ರತಿನಿಧಿಸುವ ಮೂರು ಪಟ್ಟಿಯನ್ನು ಒಳಗೊಂಡ ಕೆಂಪು ಬಣ್ಣದ ಧ್ವಜವನ್ನು ಹಾರಿಸುತ್ತಿತ್ತು.

ಇದರಲ್ಲಿರುವ ನೇಗಿಲು ರಾಜ್ಯದ ರೈತರನ್ನು ಪ್ರತಿನಿಧಿಸುತ್ತಿತ್ತು. ಈ ಧ್ವಜ ರಾಜ್ಯದ ಅನನ್ಯತೆಯನ್ನು ಗುರುತಿಸಿತ್ತು. 1952ರಲ್ಲಿ ರಾಜ್ಯ ವಿಧಾನ ಸಭೆ ಈ ಧ್ವಜವನ್ನು ರಾಜ್ಯದ ಅಧಿಕೃತ ಧ್ವಜವೆಂದು ಸ್ವೀಕರಿಸಿತ್ತು.

  ಈ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂದೆ ತೆಗೆದುಕೊಂಡಿತ್ತು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News