ಜಮ್ಮು ಕಾಶ್ಮೀರದಲ್ಲಿ ಮಾಧ್ಯಮಕ್ಕೆ ನಿರ್ಬಂಧ ಬೆಂಬಲಿಸಿದ ಪ್ರೆಸ್ ಕೌನ್ಸಿಲ್ ಅಧ್ಯಕ್ಷರ ಕ್ರಮಕ್ಕೆ ಸದಸ್ಯರ ಆಕ್ಷೇಪ

Update: 2019-08-26 09:30 GMT

ಹೊಸದಿಲ್ಲಿ, ಆ.26:  ಜಮ್ಮು ಕಾಶ್ಮೀರದಲ್ಲಿ ಸರಕಾರ  ದೂರಸಂಪರ್ಕ ಹಾಗೂ ಮಾಧ್ಯಮಗಳ ಮೇಲೆ ಹೇರಿರುವ ನಿಯಂತ್ರಣವನ್ನು ಪ್ರಶ್ನಿಸಿ ಹಾಗೂ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಕೋರಿ ‘ಕಾಶ್ಮೀರ್ ಟೈಮ್ಸ್’ ಕಾರ್ಯನಿರ್ವಾಹಕ ಸಂಪಾದಕರಾದ ಅನುರಾಧ ಭಾಸಿನ್ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿರೋಧಿಸಿದ್ದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ  ಸಿ ಕೆ ಪ್ರಸಾದ್  ಅವರು ಮಧ್ಯ ಪ್ರವೇಶಿಸಲು ಅನುಮತಿ ಕೋರಿದ್ದರು. ಇದೀಗ ಪ್ರೆಸ್ ಕೌನ್ಸಿಲ್ ಅಧ್ಯಕ್ಷರ ನಿರ್ಧಾರವನ್ನು ಕೌನ್ಸಿಲ್ ನ ಮೂವರು ನಾಮನಿರ್ದೇಶಿತ ಸದಸ್ಯರು ಆಕ್ಷೇಪಿಸಿದ್ದಾರೆ.

ಕೌನ್ಸಿಲ್ ಅಧ್ಯಕ್ಷರು ಇಂತಹ ಒಂದು ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕಿತ್ತು ಎಂದು ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ ಅಧ್ಯಕ್ಷ ಹಾಗೂ ಪ್ರೆಸ್ ಕೌನ್ಸಿಲ್ ಸದಸ್ಯ ಡಿ ಅಮರ್,  ಯೂನಿಯನ್ ಪ್ರಧಾನ ಕಾರ್ಯದರ್ಶಿ ಹಾಗೂ ಇಂಟರನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ ಉಪಾಧ್ಯಕ್ಷೆ ಸಬೀನಾ ಇಂದರಜಿತ್ ಹಾಗೂ ಪ್ರೆಸ್ ಕೌನ್ಸಿಲ್ ನ ಇಬ್ಬರು ಸದಸ್ಯರಾದ ಬಲ್ವಿಂದರ್ ಎಸ್ ಜಮ್ಮು ಹಾಗೂ ಎಂ ಮಜೀದ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷರ ಈ ಕ್ರಮ ಸಂಸ್ಥೆಗೆ ಭಾರೀ ಮುಜುಗರ ಸೃಷ್ಟಿಸಿದೆ, ಸಂಸ್ಥೆಯ ವಿಶ್ವಾಸಾರ್ಹತೆಗೂ ಧಕ್ಕೆ ತಂದಿದೆ ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವ ಪ್ರೆಸ್ ಕೌನ್ಸಿಲ್ ನ ಪ್ರಮುಖ ಉದ್ದೇಶದ ವಿರುದ್ಧವಾಗಿದೆ ಎಂದು ಅವರ ಹೇಳಿಕೆ ತಿಳಿಸಿದೆ.

ಜಮ್ಮು ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧಗಳನ್ನು ಪ್ರೆಸ್ ಕೌನ್ಸಿಲ್ ಬೆಂಬಲಿಸಿ ಅದು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯ ಹಿತದೃಷ್ಟಿಯಿಂದ ಮಾಡಲಾಗಿದೆ ಎಂದು  ಕೋರ್ಟಿಗೆ ಸಲ್ಲಿಸಿರುವ ಅಪೀಲಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News