ಸರ್ಜಿಕಲ್ ಸ್ಟ್ರೈಕ್, 370ನೆ ವಿಧಿ ರದ್ದತಿ ನಿರುದ್ಯೋಗ ಪರಿಹರಿಸದು: ಶಿವಸೇನೆ

Update: 2019-08-26 10:42 GMT

ಮುಂಬೈ, ಆ.26:  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕಾಗಿ  ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದ ಶಿವಸೇನೆ ಇದೀಗ  ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಆರ್ಥಿಕ ಕುಂಠಿತ ಕುರಿತಂತೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

“ಮೋದಿ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಕ್ಕಾಗಿ ಹಾಗೂ  370ನೇ ವಿಧಿ ರದ್ದುಗೊಳಿಸುವ ಧೈರ್ಯ ತೋರಿದ್ದರಿಂದ ಅವರು ಜನಪ್ರಿಯ ನಾಯಕರಾಗಿದ್ದಾರೆ. ಆದರೆ ಇದೆಲ್ಲಾ ಫಾಸ್ಟ್ ಫುಡ್‍ನಂತೆ. ಸರ್ಜಿಕಲ್ ದಾಳಿ ಹಾಗೂ 370ನೇ ವಿಧಿ ‘ರೋಟಿ ಕಪ್ಡಾ ಮಕಾನ್’  ಹಾಗೂ ನಿರುದ್ಯೋಗ ಸಮಸ್ಯೆಗೆ ಪರಿಹಾರವಲ್ಲ'' ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಸಂಜಯ್ ರಾವತ್ ತಮ್ಮ ಅಂಕಣ `ರೋಕ್ ಥೋಕ್' ಇದರಲ್ಲಿ ಬರೆದಿದ್ದಾರೆ.

“ಸರಕಾರ ಈಗಿನ ಪರಿಸ್ಥಿತಿಗೆ ಪಂಡಿತ್ ನೆಹರೂ ಅಥವಾ ಅವರ ನೀತಿಗಳನ್ನು ದೂಷಿಸಲು ಸಾಧ್ಯವಿಲ್ಲ'' ಎಂದೂ ಬರೆದಿರುವ ಅವರು,  “ದೇಶದಲ್ಲಿ ನಿರುದ್ಯೋಗ ಹಾಗೂ ಭಿಕ್ಷುಕರು ಹೆಚ್ಚಾಗುತ್ತಿರುವಾಗ ಸರಕಾರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ಕಾಣುತ್ತಿದೆ'' ಎಂದೂ  ಬರೆದಿದ್ದಾರೆ.

“2014ರಲ್ಲಿ ಬಿಜೆಪಿ 2 ಕೋಟಿ ವಾರ್ಷಿಕ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಆದರೆ ಕಳೆದ ಒಂದು ವರ್ಷದಲ್ಲಿ 1.10 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ, ಇದಕ್ಕೆ ಅಮಾನ್ಯೀಕರಣ ಹಾಗೂ ಜಿಎಸ್‍ಟಿ ಕಾರಣ. ಮೋದಿ ಜಗತ್ತಿನಾದ್ಯಂತ ಜನಪ್ರಿಯರಾಗಿರಬಹುದು, ಆದರೆ ಮೋದಿ ತಮ್ಮ  ಯಾವುದಾದರೂ ಒಂದು ವಿದೇಶ ಪ್ರವಾಸದಲ್ಲಿರುವಾಗ ದೇಶ ಕ್ರೋಧದಿಂದ ಭುಗಿಲೇಳಬಹುದು'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News