ಮಗು ಮೃತ್ಯು ಪ್ರಕರಣ: ಸಿಆರ್‌ಪಿಎಫ್ ಸಿಬ್ಬಂದಿ, ಪೊಲೀಸರ ವಿರುದ್ಧ ಎಫ್‌ಐಆರ್

Update: 2019-08-26 15:29 GMT

ರಾಂಚಿ, ಆ.26: ಮೂರು ವರ್ಷದ ಹೆಣ್ಣು ಮಗುವಿನ ಸಾವಿನ ಪ್ರಕರಣದಲ್ಲಿ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಾರ್ಖಂಡ್‌ನ ಪಲಾಮ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಬಕೋರಿಯಾ ಗ್ರಾಮದ ನಿವಾಸಿ ವಿನೋದ್ ಸಿಂಗ್ ಎಂಬಾತ ಮಾವೋವಾದಿ ನಕ್ಸಲ್ ಸಂಘಟನೆ ಜಾಖರ್ಂಡ್ ಜನಮುಕ್ತಿ ಮೋರ್ಛಾದ ಸದಸ್ಯ ಎನ್ನಲಾಗಿದ್ದು ಈತನನ್ನು ಹುಡುಕಾಡುತ್ತಿದ್ದ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬಂದಿಗಳ ತಂಡ ಆತನ ಮನೆಗೆ ಆಗಮಿಸಿದೆ. ರಾತ್ರಿ ವೇಳೆ ಮನೆಯ ಬಾಗಿಲು ತಟ್ಟಿದಾಗ ಸಿಂಗ್‌ನ ಪತ್ನಿ ಬಬಿತಾ ದೇವಿ ಬಾಗಿಲು ತೆಗೆದಿದ್ದಾಳೆ. ಆದರೆ ಪೊಲೀಸರು ಮನೆಯೊಳಗೆ ಪ್ರವೇಶಿಸುವುದನ್ನು ವಿರೋಧಿಸಿದ್ಧಾಳೆ. ಇದರಿಂದ ಅಸಮಾಧಾನಗೊಂಡ ಪೊಲೀಸರು ಮಹಿಳೆಯ ಕೈಯಲ್ಲಿದ್ದ 3 ವರ್ಷದ ಮಗುವನ್ನು ಕಿತ್ತುಕೊಂಡು ನೆಲಕ್ಕೆ ಎಸೆದಿದ್ದರು. ಮಗು ಬಳಿಕ ಮೃತಪಟ್ಟಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಬಳಿಕ ಬಬಿತಾ ದೇವಿ ಹಾಗೂ ವಿನೋದ್ ಸಿಂಗ್ ಭೀತಿಯಿಂದ ಮನೆಬಿಟ್ಟು ತೆರಳಿದ್ದು ಅವರ ಅನುಪಸ್ಥಿತಿಯಲ್ಲಿಯೇ ಮೃತ ಶಿಶುವಿನ ಅಂತ್ಯಸಂಸ್ಕಾರ ಶನಿವಾರ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆ ಮತ್ತು ದೇಹದಲ್ಲಿ ಗಾಯವಾಗಿರುವುದನ್ನು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಂಗ್ ಮನೆಗೆ ತೆರಳಿದ್ದ ತಂಡಲ್ಲಿ ಯಾರೆಲ್ಲಾ ಇದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಹೇಳಿಕೆ ನೀಡಿರುವ ಜಾಖರ್ಂಡ್ ಜನಮುಕ್ತಿ ಮೋರ್ಛಾ ಸಂಘಟನೆ, ವಿನೋದ್ ಸಿಂಗ್ ಸಂಘಟನೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News