ಗುಂಪು ಹತ್ಯೆ ಪ್ರಕರಣ ನಿರ್ವಹಣೆಗೆ ಹೊಸ ಕಾಯ್ದೆಯ ಅಗತ್ಯವಿಲ್ಲ: ಕೇಂದ್ರ ಸಚಿವರ ತಂಡ
ಹೊಸದಿಲ್ಲಿ, ಆ.26: ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣವನ್ನು ನಿರ್ವಹಿಸಲು ಹೊಸ ಕಾಯ್ದೆಯ ಅಗತ್ಯವಿಲ್ಲ. ಈಗಿರುವ ಕಾನೂನೇ ಸಾಕು . ಆದರೆ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಸಚಿವರ ತಂಡ ಅಭಿಪ್ರಾಯಪಟ್ಟಿದೆ.
ಮೋದಿ ಸರಕಾರದ ಪ್ರಥಮ ಅವಧಿಯಲ್ಲಿ ಸಚಿವರ ತಂಡವನ್ನು ರಚಿಸಲಾಗಿದೆ. ಆಗಿನ ಗೃಹ ಕಾರ್ಯದರ್ಶಿ ರಾಜೀವ್ ಗೌಬ ಸಮಿತಿಯ ಅಧ್ಯಕ್ಷರಾಗಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ಸಮಿತಿ ನೀಡಿದ ವರದಿಯಲ್ಲಿ ಗುಂಪು ಹತ್ಯೆ ತಡೆ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಶಿಫಾರಸು ಮಾಡಲಾಗಿತ್ತು. ಮೋದಿ ಸರಕಾರದ ಎರಡನೇ ಅವಧಿಯಲ್ಲಿ ಈ ಸಮಿತಿಗೆ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷರಾಗಿದ್ದು, ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಟಿಸಿ ಗೆಹ್ಲೋಟ್ ಸದಸ್ಯರಾಗಿದ್ದಾರೆ.
ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣವನ್ನು ನಿರ್ವಹಿಸಲು ಸಾಕಷ್ಟು ಕಾಯ್ದೆಗಳಿವೆ. ಇವುಗಳ ಅನುಷ್ಠಾನ ಸರಿಯಾಗಿಲ್ಲ. ಇಂತಹ ಪ್ರಕರಣಗಳಲ್ಲಿ ಅಪರಾಧ ನಿರ್ಣಯದ ಬಗ್ಗೆ ಪೊಲೀಸರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ದೇಶದಲ್ಲಿ ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, ಈ ಕುರಿತು ತುರ್ತು ಗಮನ ಹರಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಸಚಿವರ ತಂಡವನ್ನು ನೇಮಿಸಲಾಗಿದೆ.