×
Ad

ಧ್ವನಿವರ್ಧಕಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯ ಹತ್ಯೆ: ಏಳು ಮಂದಿಯ ಬಂಧನ

Update: 2019-08-26 21:56 IST

ಲಕ್ನೋ,ಆ.26: ಜನ್ಮಾಷ್ಟಮಿಯ ಸಂದರ್ಭದಲ್ಲಿ ತನ್ನ ಮನೆಯ ಹೊರಗೆ ಅಳವಡಿಸಲಾಗಿದ್ದ ಧ್ವನಿವರ್ಧ ಕದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯನ್ನು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ದಿಯೋರಿಯ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ರವಿವಾರದಿಂದ ದಿಯೋರಿಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಿದ್ದು ಸೆಪ್ಟೆಂಬರ್ 15ರವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕಿಶೋರ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು ಗುಂಪಿನ ನಾಯಕ ಪ್ರದ್ಯುಮ್ನ ಮದೇಸಿಯ ಹಾಗೂ ಆತನ ಮಗ ಚೇದಿಲಾಲ್ ಸೇರಿದಂತೆ ಇತರರ ವಿರುದ್ಧ ಹತ್ಯೆ, ದಂಗೆ, ಹಾನಿ ಮತ್ತು ಬೆದರಿಕೆ ದೂರುಗಳನ್ನು ದಾಖಲಿಸಲಾಗಿದೆ.

ಘಟನೆಯ ಕುರಿತು ಮಾಹಿತಿ ನೀಡಿದ ದಿಯೋರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀಪತಿ ಮಿಶ್ರಾ, ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೆಲವು ಯುವಕರು ಶನಿವಾರ ರಾತ್ರಿ ಬರ್ಹಜ್‌ನ ಪಟೇಲ್ ನಗರದಲ್ಲಿ ಡಿಜೆ ಹಾಕಿದ್ದರು. ಪಕ್ಕದ ಮನೆಯ ನಿವಾಸಿ ಮುನ್ನು ಲಾಲ್ ಎಂಬವರು ಡಿಜೆಯನ್ನು ನಿಲ್ಲಿಸುವಂತೆ ತಿಳಿಸಿದ್ದರು. ಇದರಿಂದ ಕುಪಿತಗೊಂಡ 10-12 ಯುವಕರು ಮುನ್ನು ಲಾಲ್ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದರು. ಮುನ್ನು ಲಾಲ್ ಮಕ್ಕಳಾದ ಸುಮಿತ್ ಮತ್ತು ಸಚಿನ್ ತಮ್ಮ ತಂದೆಯನ್ನು ರಕ್ಷಿಸಲು ಮುಂದಾದಾಗ ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು.

ತೀವ್ರವಾಗಿ ಗಾಯಗೊಂಡ ಸುಮಿತ್‌ರನ್ನು ತಕ್ಷಣ ಸ್ಥಳೀಯ ಜಿಲ್ಲಾಸ್ಪತ್ರೆಗೆ ಸಾಗಿಸಲಾದರೂ ಅವರು ಅದಾಗಲೇ ಕೊನೆಯುಸಿರೆಳೆದಿದ್ದರು ಎಂದು ತಿಳಿಸಿದ್ದಾರೆ. ಘಟನೆಯನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ ಮತ್ತು ಮುಖ್ಯ ರಸ್ತೆಗಳನ್ನು ಮುಚ್ಚಿದ ಹಿನ್ನೆಲೆಯಲ್ಲಿ ಬರ್ಹಜ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News