ಆರ್ಥಿಕ ಹಿಂಜರಿತದ ಎಫೆಕ್ಟ್ ಗೆ ತತ್ತರಿಸಿದ ಶಿವಮೊಗ್ಗದ ಫೌಂಡ್ರಿ ಉದ್ಯಮ: ಶೇ.70 ರಷ್ಟು ಉತ್ಪಾದನೆ ಕುಂಠಿತ

Update: 2019-08-26 16:56 GMT
ಸಾಂದರ್ಭಿಕ ಚಿತ್ರ

► ಲಕ್ಷ, ಕೋಟಿ ರೂ. ಬಂಡವಾಳ ಹೂಡಿದ ಕೈಗಾರಿಕೋದ್ಯಮಿಗಳಿಗೆ ನಷ್ಟದ ಭೀತಿ

► ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧ ಜಿಲ್ಲೆಯ ಫೌಂಡ್ರಿ ಕ್ಷೇತ್ರ

ಶಿವಮೊಗ್ಗ, ಆ. 26: ದೇಶಾದ್ಯಂತ ಎದುರಾಗಿರುವ ಆರ್ಥಿಕ ಹಿಂಜರಿತವು, ಕೈಗಾರಿಕಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ತಳಮಳ ಸೃಷ್ಟಿಸಿದೆ. ಮಾರಾಟ ಇಳಿಕೆ, ಉತ್ಪಾದನೆ ಕುಂಠಿತ, ಆರ್ಥಿಕ ನಷ್ಟ, ಉದ್ಯೋಗ ಕಡಿತ, ಘಟಕ ಬಂದ್‍ನಂತಹ ವರದಿ ಸರ್ವೇಸಾಮಾನ್ಯವಾಗಿದೆ. ಈ ನಡುವೆ ಶಿವಮೊಗ್ಗ ನಗರದ ಫೌಂಡ್ರಿ ಉದ್ಯಮ(ಲೋಹ ಎರಕದ ಉಧ್ಯಮ) ವೂ ಕೂಡ ಹಿಂಜರಿತಕ್ಕೆ ಸಿಲುಕಿ ತತ್ತರಿಸಿ ಹೋಗುತ್ತಿದೆ.

ಏಷ್ಯಾ ಖಂಡದಲ್ಲಿಯೇ ಶಿವಮೊಗ್ಗದ ಫೌಂಡ್ರಿ ಕ್ಷೇತ್ರ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ವಿಶ್ವದ ವಿವಿಧ ದೇಶಗಳಿಗೆ ಇಲ್ಲಿನ ಉತ್ಪನ್ನ ರಫ್ತಾಗುತ್ತದೆ. ವಿಶೇಷವಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಹಲವು ಬಿಡಿಭಾಗಗಳು ಸರಬರಾಜಾಗುತ್ತದೆ. ಇದರಿಂದ ಇಲ್ಲಿನ ಫೌಂಡ್ರಿ ಉದ್ಯಮವು ಪ್ರತ್ಯಕ್ಷ-ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ. ಆರ್ಥಿಕ ಕ್ಷೇತ್ರದ ಬೆಳವಣಿಗೆಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ. 

ಆದರೆ ಸದ್ಯ ಶಿವಮೊಗ್ಗದ ಫೌಂಡ್ರಿ ಉದ್ಯಮ ಸಂಕಷ್ಟದ ಸುಳಿಗೆ ಸಿಲುಕಿದೆ. ಮಾಚೇನಹಳ್ಳಿಯ ಕೈಗಾರಿಕಾ ವಸಾಹತುವಿಗೆ ಕಾಲಿಟ್ಟರೆ, ದೇಶದಲ್ಲಿ ಕಂಡುಬರುತ್ತಿರುವ ಆರ್ಥಿಕ ಹಿಂಜರಿತದ ಎಫೆಕ್ಟ್ ಯಾವ ರೀತಿಯಲ್ಲಿ ಆಟೋಮೊಬೈಲ್ ಅವಲಂಬಿತ ಫೌಂಡ್ರಿ ಉದ್ಯಮದ ಮೇಲೆ ಬೀರಿದೆ ಎಂಬುವುದರ ಅರಿವಾಗುತ್ತದೆ. 

ಈಗಾಗಲೇ ಬೇಡಿಕೆ ಕುಸಿತದ ಕಾರಣದಿಂದ, ಹಲವು ಫೌಂಡ್ರಿ ಘಟಕಗಳಲ್ಲಿ ಗಣನೀಯ ಪ್ರಮಾಣದ ಉತ್ಪಾದನೆ ಕಡಿಮೆಗೊಳಿಸಲಾಗಿದೆ. ಕೆಲ ಘಟಕಗಳು ನೂರಾರು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿವೆ. ಇನ್ನೊಂದೆಡೆ ಕೆಲ ಘಟಕಗಳು ಕೆಲಸದ ದಿನಗಳನ್ನು ಕಡಿತಗೊಳಿಸಿವೆ. ಕಾರ್ಮಿಕರಿಗೆ ಕಡ್ಡಾಯ ರಜೆ ನೀಡುತ್ತಿವೆ. ಮತ್ತೆ ಕೆಲ ಘಟಕಗಳು ಕೆಲ ದಿನಗಳ ಕಾಲ ಸಂಪೂರ್ಣ ಉತ್ಪಾದನೆಯನ್ನೇ ಸ್ಥಗಿತಗೊಳಿಸಿರುವ ಮಾಹಿತಿಗಳು ಕೇಳಿಬರುತ್ತಿವೆ. 

ಆತಂಕ: ಕಳೆದ ಸುಮಾರು ಒಂದೆರೆಡು ತಿಂಗಳಿನಿಂದ ಫೌಂಡ್ರಿ ಉದ್ಯಮದ ಮೇಲೆ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿದೆ. ದೊಡ್ಡ ದೊಡ್ಡ ಘಟಕಗಳೇ ಉತ್ಪಾದನೆ ಕಡಿಮೆಗೊಳಿಸಿರುವುದು, ಸಣ್ಣ ಘಟಕಗಳ ಉದ್ಯಮಿದಾರರನ್ನು ಕಂಗೆಡಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಕಾರ್ಮಿಕರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ. ಉದ್ಯೋಗ ಕಳೆದುಕೊಳ್ಳುವ ಆತಂಕ ಸೃಷ್ಟಿಸಿದೆ. 

ಇನ್ನೊಂದೆಡೆ ಲಕ್ಷ, ಕೋಟಿ ರೂ. ಬಂಡವಾಳ ತೊಡಗಿಸಿ ಉದ್ಯಮ ನಡೆಸುತ್ತಿರುವ ಕೆಲ ಕೈಗಾರಿಕೋದ್ಯಮಿಗಳು ಆರ್ಥಿಕ ನಷ್ಟದ ಭೀತಿಗೊಳಗಾಗಿದ್ದಾರೆ. ಪ್ರಸ್ತುತ ಹಳಿ ತಪ್ಪಿರುವ ಉದ್ಯಮ ಮತ್ತೆ ಯಾವಾಗ ಸರಿದಾರಿಗೆ ಬರಲಿದೆ? ಎಂದಿನಂತೆ ಘಟಕಗಳು ಕಾರ್ಯಾಚರಿಸುವುದು ಯಾವಾಗ? ಎಂಬ ಚಿಂತೆಯಲ್ಲಿ ದಿನದೂಡುವಂತಾಗಿದೆ. 

ಫೌಂಡ್ರಿ ಉದ್ಯಮದ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ನಿಶ್ಚಿತವಾಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಚೇತರಿಕೆ ಕಂಡುಬಂದರೆ ಎಲ್ಲವೂ ಸರಿಯಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರ ಉದ್ಯಮ ಪುನಶ್ಚೇತನಕ್ಕೆ ಹಲವು ಕ್ರಮಕೈಗೊಂಡಿದೆ. ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂಬುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ ಎಂದು ಸ್ಥಳೀಯ ಕೈಗಾರಿಕೋದ್ಯಮಿಯೋರ್ವರು ಅಭಿಪ್ರಾಯಪಡುತ್ತಾರೆ. ಒಟ್ಟಾರೆ ದೇಶದಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಹಿಂಜರಿತವು ಶಿವಮೊಗ್ಗದ ಫೌಂಡ್ರಿ ಉದ್ಯಮದ ಮೇಲೆಯೂ ತನ್ನ ಕರಿನೆರಳು ಬೀರಿದೆ. ಮತ್ತೆ ಈ ಉದ್ಯಮದಲ್ಲಿ ಚೇತರಿಕೆ ಕಾಣಿಸಿಕೊಳ್ಳುವುದು ಯಾವಾಗ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಉತ್ಪಾದನೆ ಸಂಪೂರ್ಣ ಸ್ಥಗಿತ: ಶಿವಸಾಯಿ ಕಾಸ್ಟಿಂಗ್ ನಿರ್ದೇಶಕ ಸುಮಂತ್ ಮಂಜುನಾಥ್
'ತಮ್ಮ ಘಟಕದಲ್ಲಿ ಶೇ. 10 ರಷ್ಟು ಆಟೋಮೊಬೈಲ್ ಆಧಾರಿತ ಉತ್ಪನ್ನ ತಯಾರಿಸಿಕೊಂಡು ಬರುತ್ತಿದ್ದೇವೆ. ಆದರೆ ಕಳೆದ ಮೂರು ತಿಂಗಳಿನಿಂದ ಬೇಡಿಕೆ ಕುಸಿದಿದೆ. ಈ ಕಾರಣದಿಂದ ಆಟೋಮೊಬೈಲ್ ಸಂಬಂಧಿತ ಉತ್ಪನ್ನಗಳ ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದೇವೆ. ಇದರಿಂದ ಸಾಕಷ್ಟು ಆದಾಯ ನಷ್ಟವಾಗುತ್ತಿದೆ. ಆದಾಯ ಕೊರತೆಯ ಹೊರತಾಗಿಯೂ ಕಾರ್ಮಿಕರಿಗೆ ತೊಂದರೆ ಉಂಟು ಮಾಡಿಲ್ಲ. ಅವರನ್ನು ಇತರೆ ಕೆಲಸಕ್ಕೆ ತೊಡಗಿಸಿಕೊಳ್ಳಲಾಗಿದೆ. ಮತ್ತೆ ಯಾವಾಗ ಆಟೋಮೊಬೈಲ್ ಉತ್ಪನ್ನ ತಯಾರಿಕೆ ಪುನಾರಾರಂಭಿಸಲಾಗುತ್ತದೆ ಎಂಬುವುದು ಹೇಳಲಾಗದು' ಎಂದು ಶಿವಮೊಗ್ಗ ನಗರದ ಶ್ರೀ ಶಿವಸಾಯಿ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಸುಮಂತ್ ಮಂಜುನಾಥ್‍ ಅಭಿಪ್ರಾಯಪಡುತ್ತಾರೆ. 

ಶೇ.70 ರಷ್ಟು ಉತ್ಪಾದನೆ ಕುಂಠಿತ: ಡಿ.ಎಸ್.ಚಂದ್ರಶೇಖರ್
'ಪ್ರಸ್ತುತ ದೇಶದಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಹಿಂಜರಿತದ ಪರಿಣಾಮವು, ಶಿವಮೊಗ್ಗದ ಫೌಂಡ್ರಿ ಉದ್ಯಮದ ಮೇಲೂ ಬೀರಿದೆ. ಶೇ. 70 ರಷ್ಟು ಉತ್ಪಾದನೆ ಕುಂಠಿತವಾಗಿದೆ. ಇದಕ್ಕೆ ಕೆಲ ಆಟೋಮೊಬೈಲ್ ಕ್ಷೇತ್ರದವರು ಗ್ರಾಹಕರ ಬೇಡಿಕೆಗಿಂತ ಹೆಚ್ಚಿನ ಉತ್ಪಾದನೆ ಮಾಡಿಟ್ಟುಕೊಂಡಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಪ್ರಕಟಿಸಿದ ನಂತರ ಉಂಟಾದ ಗೊಂದಲ ಮತ್ತೀತರ ನಕರಾತ್ಮಕ ಅಂಶಗಳಿಂದ ವಹಿವಾಟು ಕುಸಿದಿದೆ. ಅಕ್ಟೋಬರ್ ತಿಂಗಳ ನಂತರ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವ ಸಾಧ್ಯತೆಯಿದೆ. ತಮ್ಮ ಘಟಕದಲ್ಲಿ ಆಟೋಮೊಬೈಲ್ ಜೊತೆ ಇತರೆ ಕ್ಷೇತ್ರಗಳಿಗೆ ಸಂಬಂಧಿಸಿದ ಉತ್ಪಾದನೆಯೂ ಮಾಡುತ್ತಿದ್ದೇವೆ. ಆಟೋಮೊಬೈಲ್ ಸಂಬಂಧಿತ ಉತ್ಪಾದನೆ ಇಳಿಮುಖವಾಗಿದೆ. ಉಳಿದಂತೆ ಯಾವುದೇ ಸಮಸ್ಯೆಯಿಲ್ಲ' ಎಂದು ಶಿವಮೊಗ್ಗದ ಶಾಂತಲಾ ಸ್ಟೆರೋಕಾಸ್ಟ್ ನ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್‍ರವರು ತಿಳಿಸುತ್ತಾರೆ. 

ಪರಿಹಾರ ಕ್ರಮ ಜಾರಿಗೊಳಿಸಬೇಕು: ಕೈಗಾರಿಕಾ ಸಂಘದ ನಿರ್ದೇಶಕ ಎನ್.ಗೋಪಿನಾಥ್
'ಆರ್ಥಿಕ ಹಿಂಜರಿತದಿಂದ ದೇಶದ ಕೈಗಾರಿಕಾ ಕ್ಷೇತ್ರ ನಷ್ಟದ ಹಾದಿಯಲ್ಲಿದೆ. ಅದರಲ್ಲಿಯೂ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಸಂಕಷ್ಟ ಎದುರಿಸುತ್ತಿದೆ. ಈ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ ಶಿವಮೊಗ್ಗದ ಫೌಂಡ್ರಿ ಉದ್ಯಮದ ಮೇಲೆಯೂ ಕರಿನೆರಳು ಬಿದ್ದಿದೆ. ಈಗಾಗಲೇ ಕೇಂದ್ರ ಸರ್ಕಾರವು ದೂರಗಾಮಿ ಪರಿಣಾಮ ಬೀರುವ ಸಮಗ್ರ ಸ್ವರೂಪದ ಕೆಲ ರಿಯಾಯಿತಿಗಳನ್ನು ಕೈಗಾರಿಕಾ ಕ್ಷೇತ್ರಕ್ಕೆ ಪ್ರಕಟಿಸಿದೆ. ಇದನ್ನು ಆದಷ್ಟು ಶೀಘ್ರ ಕಾರ್ಯಗತಗೊಳಿಸಬೇಕು. ಬ್ಯಾಂಕ್‍ಗಳ ಮೂಲಕ ರಿಯಾಯಿತಿ ಸಾಲಸೌಲಭ್ಯ ಘೋಷಣೆಯ ಜೊತೆಗೆ, ಉದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ ಎಲ್ಲ ಕ್ರಮಗಳನ್ನು ಜಾರಿಗೊಳಿಸಬೇಕು. ಬಾಗಿಲು ಮುಚ್ಚಿರುವ ಉದ್ಯಮಗಳ ಕಾರ್ಮಿಕರಿಗೆ ಮಾನವೀಯತೆಯ ದೃಷ್ಟಿಯಿಂದ ಘಟಕ ಪುನಾರಾರಂಭಗೊಳ್ಳುವವರೆಗೆ ಸರ್ಕಾರವೇ ಸೂಕ್ತ ಪುನರ್ವಸತಿ ಪರಿಹಾರ ಕ್ರಮಗಳನ್ನು ಮಾಡಬೇಕು' ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಎನ್.ಗೋಪಿನಾಥ್‍ರವರು ಆಗ್ರಹಿಸಿದ್ದಾರೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News