ಎನ್‌ಆರ್‌ಸಿ ಸಂಯೋಜಕರ ವಿರುದ್ಧ ಬಿಜೆಪಿ ವಾಗ್ದಾಳಿ: ಯಾಕೆ ಗೊತ್ತೇ ?

Update: 2019-08-27 04:01 GMT

ಗುವಾಹತಿ: ಅಸ್ಸಾಂನ ಅಂತಿಮ ನಾಗರಿಕ ಪಟ್ಟಿ ಪ್ರಕಟಿಸಲು ಐದು ದಿನಗಳ ಮಾತ್ರ ಬಾಕಿ ಉಳಿದಿದ್ದು, ಎನ್‌ಆರ್‌ಸಿ ಸಂಯೋಜಕ ಪ್ರತೀಕ್ ಹಜೇಲಾ ವಿರುದ್ಧ ಆಡಳಿತಾರೂಢ ಬಿಜೆಪಿ ವಾಗ್ದಾಳಿ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಜೇಲಾ ಅವರು ಕೇವಲ ಎರಡು- ಮೂರು ಸಂಸ್ಥೆಗಳ ಜತೆ ಚರ್ಚಿಸಿ ಪಟ್ಟಿ ಪರಿಷ್ಕರಿಸಿದ್ದಾರೆ. ಇದರಿಂದ ಅರ್ಹ ಭಾರತೀಯ ನಾಗರಿಕರು ಪಟ್ಟಿಯಿಂದ ಹೊರಗುಳಿದಿರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದೆ.

2017ರ ಕರಡು ಎನ್‌ಆರ್‌ಸಿಯಲ್ಲಿ ಹೆಸರಿದ್ದರೂ, ಕಳೆದ ಜುಲೈನಲ್ಲಿ ಬಿಡುಗಡೆ ಮಾಡಿದ ಪರಿಷ್ಕೃತ ಕರಡು ಪಟ್ಟಿಯಿಂದ ತಮ್ಮ ಹೆಸರು ಕೈಬಿಡಲಾಗಿದೆ ಎಂಬ ಹಲವು ದೂರುಗಳು ಬಂದಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಎನ್‌ಆರ್‌ಸಿ ಸಂಯೋಜಕ ಪ್ರತೀಕ್ ಹಜೇಲಾ ಅವರು ತಮ್ಮದೇ ಅಭಿಪ್ರಾಯದಂತೆ ಕೇವಲ ಎರಡು ಮೂರು ಸಂಘಟನೆಗಳ ಜತೆ ಚರ್ಚೆ ನಡೆಸಿ ಪಟ್ಟಿ ಪರಿಷ್ಕರಿಸುತ್ತಿದ್ದಾರೆ" ಎಂದು ಅವರು ಆಪಾದಿಸಿದರು.

ಕೇವಲ ಕೆಲ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಹಿಂದೂಗಳು ಸೇರಿದಂತೆ ಹಲವು ಮಂದಿ ಭಾರತೀಯರ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇದ್ದರೆ ಅದನ್ನು ದೋಷ ರಹಿತ ಎಂದು ಹೇಗೆ ಹೇಳಲು ಸಾಧ್ಯ ? ಎಂದು ಅವರು ಪ್ರಶ್ನಿಸಿದ್ದಾರೆ.

ವಿದೇಶೀಯರು ಎಂದು ಘೋಷಿಸಲ್ಪಟ್ಟ ಮಂದಿ ಮತ್ತೆ ಕರಡು ಎನ್‌ಆರ್‌ಸಿ ಪಟ್ಟಿಗೆ ಸೇರಿದ್ದಾರೆ ಎಂಬ ಮಾಹಿತಿ ಇದೆ. ಎನ್‌ಆರ್‌ಸಿ ಪರಿಷ್ಕರಣೆಗೆ 1200 ಕೋಟಿ ರೂಪಾಯಿಗಿಂತಲೂ ಅಧಿಕ ವೆಚ್ಚ ಮಾಡಲಾಗಿದೆ. ಅರ್ಹನಾದ ಒಬ್ಬ ನಾಗರಿಕ ಪಟ್ಟಿಯಿಂದ ಹೊರಗುಳಿದರೂ ಅದು ನಗೆಪಾಟಲು. ಹಲವು ಮಂದಿ ನಿವೃತ್ತ ಭದ್ರತಾ ಸಿಬ್ಬಂದಿ, ಸ್ವಾತಂತ್ರ್ಯ ಯೋಧರ ಕುಟುಂಬದವರು ಹಾಗೂ ವಿದೇಶಿ ವಿರೋಧಿ ಚಳವಳಿಯ ಹುತಾತ್ಮರ ಕುಟುಂಬಗಳ ಸದಸ್ಯರ ಹೆಸರನ್ನು ಕರಡು ಎನ್‌ಆರ್‌ಸಿಯಿಂದ ಕೈಬಿಡಲಾಗಿದೆ ಎಂದು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News