ಅಮಿತ್ ಶಾ ಹೆಲಿಕಾಪ್ಟರ್ ಹಾರಾಟ ನಡೆಸಲು ನಕಲಿ ಇಮೇಲ್ ಕಳುಹಿಸಿದ ಕಾರ್ಗಿಲ್ ಹೀರೋ: ಬಿಎಸ್‍ಎಫ್ ತನಿಖೆ ಆರಂಭ

Update: 2019-08-27 08:06 GMT

ಹೊಸದಿಲ್ಲಿ, ಆ.27: ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಣಿಸುವ ಹೆಲಿಕಾಪ್ಟರ್ ನ ಪೈಲಟ್ ಆಗುವ ಉದ್ದೇಶದಿಂದ ಭಾರತೀಯ ವಾಯುಸೇನೆಯ ಕಾರ್ಗಿಲ್ ಹೀರೋ ಒಬ್ಬರು ಬಿಎಸ್‍ಎಫ್ ವಾಯುದಳದ ಹೆಸರಿನಲ್ಲಿ ನಕಲಿ ಇಮೇಲ್ ಕಳುಹಿಸಿ ತನ್ನ ಸ್ವಂತ ಹೆಸರನ್ನು ಶಿಫಾರಸು ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತಂತೆ ಬಿಎಸ್‍ಎಫ್ ಹಾಗೂ ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜೂನ್ ಹಾಗೂ ಜುಲೈ ತಿಂಗಳಲ್ಲಿ ಗೃಹ ಸಚಿವರು ಪ್ರಯಾಣಿಸುವ ಹೆಲಿಕಾಪ್ಟರ್ ನಿರ್ವಹಿಸುವ ಎಲ್ & ಟಿ ಸಂಸ್ಥೆಗೆ ಹಲವು ಇಮೇಲ್ ಗಳು ಬಿಎಸ್‍ಎಫ್ ವಾಯುದಳದಿಂದ ಬಂದು ನಿವೃತ್ತ ವಿಂಗ್ ಕಮಾಂಡರ್ ಹಾಗೂ ಬಿಎಸ್‍ಎಫ್ ಪೈಲಟ್  ಜೆ.ಎಸ್. ಸಂಗ್ವಾನ್  ಅವರಿಗೆ  ವಿಮಾನ ಹಾರಾಟಕ್ಕೆ ಅನುಮತಿ ನೀಡಬೇಕೆಂದು ಎಲ್ & ಟಿಯನ್ನು ಕೋರಿತ್ತು.

ಅವರು ತರಬೇತಿ ಹೊಂದಿದ ಎಂಬ್ರೇರ್ ಪೈಲಟ್, ಪೈಲಟ್ ಇನ್ ಕಮಾಂಡ್ ಗ್ರೇಡಿಂಗ್ ಹೊಂದಿದ್ದಾರೆ ಹಾಗೂ  4,000ಕ್ಕೂ ಹೆಚ್ಚು ಗಂಟೆಗಳ ಹಾರಾಟ ಅನುಭವವಿದೆಯೆಂದು ಹೇಳಲಾಗಿತ್ತು. ಈ ಉನ್ನತ ಮಟ್ಟದ ಶಿಫಾರಸಿನಂತೆ ಎಲ್&ಟಿ ಪೈಲಟ್ ಗೆ ತನ್ನ ಚೆನ್ನೈ- ದಿಲ್ಲಿ-ಮುಂಬೈ  ವಿಮಾನದಲ್ಲಿ ಜುಲೈ ತಿಂಗಳಲ್ಲಿ ಹಾರಾಟ ನಡೆಸುವ ಅವಕಾಶದ ಆಫರ್ ಮಾಡಿತ್ತು. ಆದರೆ ಪೈಲಟ್ ಚೆನ್ನೈಗೆ ತೆರಳುವ ಮುನ್ನ ಎಲ್ & ಟಿ ಬಿಎಸ್‍ಎಫ್ ವಾಯು ದಳಕ್ಕೆ ಕರೆ ಮಾಡಿ  ವಿಚಾರಿಸಿದಾಗ ಬಿಎಸ್‍ಎಫ್ ಯಾವುದೇ ಪೈಲಟ್ ಹೆಸರು ಶಿಫಾರಸು ಮಾಡಿಲ್ಲ ಎಂದು ತಿಳಿದು ಬಂದಾಗ ಸಂಗ್ವಾನ್ ವಂಚಿಸಿರುವುದು ತಿಳಿದು ಬಂದಿತ್ತು.

ಎಂಬ್ರೇರ್ ವಿಮಾನ ಹಾರಾಟದಲ್ಲಿ ಅಗತ್ಯ ಗಂಟೆಗಳನ್ನು ದಾಖಲಿಸಲು ಯತ್ನಿಸಿ ಈ ಮೂಲಕ ಗೃಹ ಸಚಿವರ ಪೈಲಟ್ ಆಗಬಹುದೆಂದು ಆತ ಹೀಗೆ ಮಾಡಿದ್ದರು. ನಿಯಮ ಪ್ರಕಾರ ವಿಐಪಿ ವಿಮಾನ ಹಾರಾಟಕ್ಕೆ ಪೈಲಟ್ ಗಳಿಗೆ ಕನಿಷ್ಠ 500 ಗಂಟೆಗಳ ಹಾರಾಟ ಅನುಭವ ಬೇಕಿದ್ದರೆ ಗೃಹ ಸಚಿವರ ವಿಮಾನ ಹಾರಾಟಕ್ಕೆ 1,000ಕ್ಕೂ ಅಧಿಕ ಗಂಟೆಗಳ ಹಾರಾಟ ಅನುಭವ ಅಗತ್ಯ.

ಆದರೆ ಪೈಲಟ್ ಸಂಗ್ವಾನ್‍ಗೆ ಗೃಹ ಸಚಿವರ  ವಿಮಾನ ಹಾರಾಟ ಮಾಡಾಬೇಕೆಂಬ ಇಚ್ಛೆ ಏಕಿದೆಯೆಂದು ಗೊತ್ತಿಲ್ಲ. 1999ರ ಕಾರ್ಗಿಲ್ ಯುದ್ಧ ಕಾರ್ಯಾಚರಣೆಯ ವೇಳೆ ತೋರಿದ ಸಾಹಸಕ್ಕಾಗಿ  ಪದಕ ಗಳಿಸಿದ್ದ ಸಂಗ್ವಾನ್ ತನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ ಹಾಗೂ ಒಳ್ಳೆಯ ಉದ್ದೇಶದಿಂದ  ತಾನು ಈ ರೀತಿ ಮಾಡಿದ್ದಾಗಿ, ತನ್ನ  ವಿರುದ್ಧದ ಯಾವುದೇ ಕ್ರಮಕ್ಕೂ ಸಿದ್ಧ  ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News