ಸಹೋದ್ಯೋಗಿಯ ಕೊಂದು ಆತ್ಮಹತ್ಯೆ ಮಾಡಿಕೊಂಡ ಯೋಧ
ಚೆನ್ನೈ, ಆ.27: ಹಾಜರಿ ಪುಸ್ತಕದಲ್ಲಿ ಸಹಿ ಹಾಕುವ ವಿಷಯದಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಸೇನೆಯ ರೈಫಲ್‌ಮ್ಯಾನ್ ತನ್ನ ಸಹೋದ್ಯೋಗಿ ಹವಿಲ್ದಾರ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈಯ ಪಲ್ಲವರಂ ಸೇನಾ ಶಿಬಿರದಲ್ಲಿ ನಡೆದಿದೆ.
ಹಾಜರಿ ಪುಸ್ತಕದಲ್ಲಿ ಪೆನ್ ಬದಲು ಪೆನ್ಸಿಲ್‌ನಿಂದ ಸಹಿ ಹಾಕಿದ ಬಗ್ಗೆ ರೈಫಲ್‌ಮ್ಯಾನ್ ಅನ್ನು ಹವೀಲ್ದಾರ್ ಪ್ರವೀಣ್ ಕುಮಾರ್ ಜೋಷಿ ಬಯ್ದಿದ್ದ. ಬಳಿಕ ರೈಫಲ್‌ಮ್ಯಾನನ್ನು ಮತ್ತೆ ಕರೆದು ಆತನ ಉಡಾಫೆಯ ವರ್ತನೆಗಾಗಿ ಶಿಕ್ಷೆ ವಿಧಿಸಿದ್ದ ಎಂದು ಮೂಲಗಳು ತಿಳಿಸಿವೆ. ನಂತರ ಭದ್ರತಾ ಸಿಬಂದಿಯ ಅನುಮತಿ ಪಡೆದು ವಿಶ್ರಾಂತಿ ಕೊಠಡಿಗೆ ತೆರಳಿದ್ದ ರೈಫಲ್‌ಮ್ಯಾನ್ ಅಲ್ಲಿ ಮಲಗಿದ್ದ ಹವೀಲ್ದಾರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿ ನಂತರ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣದ ಕುರಿತು ಸೇನೆ ತನಿಖೆ ಆರಂಭಿಸಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.