×
Ad

ಜಮ್ಮು ಕಾಶ್ಮೀರ: ಆರೋಗ್ಯ ಸೇವೆಯ ಸಂಕಷ್ಟ ವಿವರಿಸುತ್ತಿದ್ದ ವೈದ್ಯರನ್ನು ಎಳೆದೊಯ್ದ ಪೊಲೀಸರು

Update: 2019-08-27 21:26 IST
ಫೋಟೊ ಕೃಪೆ: BBC News

ಶ್ರೀನಗರ, ಆ.27: 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಆರೋಗ್ಯ ಸೇವೆಗಳ ಲಭ್ಯತೆಗೆ ಎದುರಾಗಿರುವ ಅಡ್ಡಿಯ ಕುರಿತು ಮಾಧ್ಯಮದವರಿಗೆ ವಿವರಿಸುತ್ತಿದ್ದ ವೈದ್ಯರನ್ನು ಪೊಲೀಸರು ರಹಸ್ಯ ಸ್ಥಳಕ್ಕೆ ಕರೆದೊಯ್ದ ಘಟನೆ ಶ್ರೀನಗರದಲ್ಲಿ ನಡೆದಿದೆ.

ಶ್ರೀನಗರದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೂತ್ರಶಾಸ್ತ್ರಜ್ಞನಾಗಿರುವ ಉಮರ್ ಸಲೀಮ್ ಎಂಬ ವೈದ್ಯರು ಶ್ರೀನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ರಾಜ್ಯದಲ್ಲಿ ಸಂವಹನ ವ್ಯವಸ್ಥೆಗೆ ನಿರ್ಬಂಧ ವಿಧಿಸಿರುವುದರಿಂದ ರೋಗಿಗಳ ಬದುಕು ಅಪಾಯದಲ್ಲಿದೆ. ಆಗಸ್ಟ್ 6ರಂದು ಕೆಮೊಥೆರಪಿ ಚಿಕಿತ್ಸೆ ಪಡೆಯಬೇಕಿದ್ದ ರೋಗಿಯೊಬ್ಬರು ಆಸ್ಪತ್ರೆಗೆ ಆಗಸ್ಟ್ 24ರಂದು ಬಂದರು. ಕೆಮೊಥೆರಪಿ ಔಷಧಿಯನ್ನು ದಿಲ್ಲಿಯಿಂದ ಪಡೆಯಬೇಕಿತ್ತು. ಆದರೆ ಇಂಟರ್‌ನೆಟ್ ಸ್ಥಗಿತಗೊಳಿಸಿದ್ದರಿಂದ ಆನ್‌ಲೈನ್‌ನಲ್ಲಿ ಆರ್ಡರ್ ನೀಡಲು ಸಾಧ್ಯವಾಗಲಿಲ್ಲ. ಅವರ ಕೆಮೊಥೆರಪಿ ಚಿಕಿತ್ಸೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸಲೀಮ್ ಹೇಳಿದರು.

ಅಲ್ಲದೆ ವಾರಕ್ಕೆ ಮೂರು ಬಾರಿ ಡಯಾಲಿಸೀಸ್ ಮಾಡಿಕೊಳ್ಳಬೇಕಿರುವ ರೋಗಿಗಳು ವಾರಕ್ಕೆ ಒಂದು ಬಾರಿ ಡಯಾಲಿಸೀಸ್ ಮಾಡಿಸಿಕೊಳ್ಳುವಂತಾಗಿದೆ. ಬ್ಯಾಂಕ್‌ಗಳಲ್ಲಿ ನಗದು ಕೊರತೆಯಿರುವ ಕಾರಣ ಹಲವು ರೋಗಿಗಳಿಗೆ ಔಷಧ ಕೊಳ್ಳಲು ಅಥವಾ ಆಸ್ಪತ್ರೆಯವರೆಗೆ ಬರಲೂ ಹಣ ಇಲ್ಲ ಎಂಬಂತಾಗಿದೆ. ರೋಗಿಗಳಿಗೆ ಡಯಾಲಿಸೀಸ್ ಲಭ್ಯವಾಗದಿದ್ದರೆ ಅವರು ಸಾವನ್ನಪ್ಪುತ್ತಾರೆ. ಕ್ಯಾನ್ಸರ್ ರೋಗಿಗಳು ಕೆಮೊಥೆರಪಿ ಚಿಕಿತ್ಸೆ ಪಡೆಯದಿದ್ದರೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಅವರೂ ಕೊನೆಯುಸಿರೆಳೆಯುತ್ತಾರೆ. ಆದ್ದರಿಂದ ಸರಕಾರ ಆಸ್ಪತ್ರೆಗಳಿಗೆ ಹಾಗೂ ಚಿಕಿತ್ಸಾಲಯಗಳಿಗೆ ಇನ್ನಷ್ಟು ಸ್ಥಿರ ದೂರವಾಣಿಯ ಸಂಪರ್ಕ ಕಲ್ಪಿಸಬೇಕು ಎಂದು ಸಲೀಂ ಸರಕಾರವನ್ನು ಒತ್ತಾಯಿಸಿದರು.

ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಸಲೀಂರನ್ನು ಬಲವಂತವಾಗಿ ಅಲ್ಲಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಸಂವಹನ ವ್ಯವಸ್ಥೆಯನ್ನು ನಿರ್ಬಂಧಿಸಿರುವ ಕಾರಣ ಅವರು ಈಗ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲು ಆಗಲಿಲ್ಲ ಎಂದು ಮಾಧ್ಯಮದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News