×
Ad

ಅಸ್ಸಾಂ: ಕನಿಷ್ಠ ಒಂಭತ್ತು ಘೋಷಿತ ವಿದೇಶಿಯರು ಗೋಲಪಾರಾ ಬಂಧನ ಕೇಂದ್ರದಿಂದ ಬಿಡುಗಡೆ

Update: 2019-08-27 21:42 IST

 ಗುವಾಹಟಿ,ಆ.27: ವಿದೇಶಿಯರಂದು ಘೋಷಿಸಲಾಗಿದ್ದ ಮತ್ತು ಗೋಲಪಾರಾ ಜಿಲ್ಲಾ ಕಾರಾಗೃಹದ ಬಂಧನ ಕೇಂದ್ರದಲ್ಲಿರಿಸಲಾಗಿದ್ದ ಕನಿಷ್ಠ ಒಂಭತ್ತು ಜನರನ್ನು ಸೋಮವಾರ ಬಿಡುಗಡೆಗೊಳಿಸಲಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಅಂತಿಮ ಪಟ್ಟಿ ಆ.31ರಂದು ಬಿಡುಗಡೆಗೊಳ್ಳುವ ಮುನ್ನ ಈ ಬೆಳವಣಿಗೆ ನಡೆದಿದೆ.

ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಬಂಧನದಲ್ಲಿರುವವರು ತಲಾ ಒಂದು ಲ.ರೂ.ಗಳ ಎರಡು ಭದ್ರತೆ, ದೃಢೀಕರಿಸಬಹುದಾದ ವಿಳಾಸ ಮತ್ತು ಬಯೊಮೆಟ್ರಿಕ್ ವಿವರಗಳನ್ನು ಸಲ್ಲಿಸಿದರೆ ಅವರನ್ನು ಬಿಡುಗಡೆಗೊಳಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ ಬಳಿಕ ಬಂಧಮುಕ್ತಗೊಳ್ಳಬೇಕಿದ್ದ 335 ಘೋಷಿತ ವಿದೇಶಿಯರಲ್ಲಿ ಈ ಒಂಭತ್ತು ಜನರು ಸೇರಿದ್ದಾರೆ. ಅವರು ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗಬೇಕಾಗುತ್ತದೆ.

ಬಿಡುಗಡೆಗೊಂಡವರ ಪೈಕಿ ನಾಲ್ವರು ಮುಸ್ಲಿಮರಾಗಿದ್ದರೆ, ಐವರು ಹಿಂದುಗಳಾಗಿದ್ದಾರೆ. ರಾಜ್ಯಾದ್ಯಂತ ಆರು ಬಂಧನ ಕೇಂದ್ರಗಳಲ್ಲಿ 1,145 ಘೋಷಿತ ವಿದೇಶಿಯರನ್ನಿರಿಸಲಾಗಿದೆ.

ಈ ಬಂಧನ ಕೇಂದ್ರಗಳಲ್ಲಿ ಈ ವರ್ಷ ಏಳು ಘೋಷಿತ ವಿದೇಶಿಯರು ಮೃತಪಟ್ಟಿದ್ದಾರೆ ಎಂದು ಸರಕಾರವು ಕಳೆದ ಜುಲೈನಲ್ಲಿ ತಿಳಿಸಿತ್ತು. ಈವರೆಗೆ ಈ ಕೇಂದ್ರಗಳಲ್ಲಿ ಒಟ್ಟು 25 ಘೋಷಿತ ವಿದೇಶಿಯರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News