×
Ad

ಲೈಂಗಿಕ ದೌರ್ಜನ್ಯದ ಬಗ್ಗೆ ವೀಡಿಯೋ ಪೋಸ್ಟ್ ಮಾಡಿದ ಯುವತಿ ನಾಪತ್ತೆ: ಮಾಜಿ ಬಿಜೆಪಿ ಸಂಸದನ ವಿರುದ್ಧ ದೂರು

Update: 2019-08-27 21:58 IST

ಹೊಸದಿಲ್ಲಿ, ಆ. 27: ತನ್ನ ಕಾಲೇಜಿನ ಆಡಳಿತ ಮಂಡಳಿಯ ಪ್ರಭಾವಶಾಲಿ ವ್ಯಕ್ತಿ ದೌರ್ಜನ್ಯ ಎಸಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ ಬಳಿಕ ಉತ್ತರಪ್ರದೇಶದ 23 ವರ್ಷದ ಕಾನೂನು ವಿದ್ಯಾರ್ಥಿನಿ ಶನಿವಾರದಿಂದ ನಾಪತ್ತೆಯಾಗಿದ್ದಾರೆ.

ಆಕೆ ವೀಡಿಯೊದಲ್ಲಿ ಯಾರೊಬ್ಬರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಆಕೆಯ ತಂದೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಬಿಜೆಪಿಯ ಮಾಜಿ ಸಂಸದ ಸ್ವಾಮಿ ಚಿನ್ಮಯಾನಂದ ವಿರುದ್ಧ ದೂರು ಸಲ್ಲಿಸಿದ್ದಾರೆ.

ವಿದ್ಯಾರ್ಥಿನಿಯ ತಂದೆ ಸಲ್ಲಿಸಿದ ದೂರನ್ನು ಪೊಲೀಸರು ಇದುವರೆಗೆ ದಾಖಲಿಸಿಕೊಂಡಿಲ್ಲ. ಈ ಆರೋಪವನ್ನು ಚಿನ್ಮಾಯಾನಂದ ಅವರ ವಕೀಲ ತಳ್ಳಿ ಹಾಕಿದ್ದಾರೆ. ಮಾಜಿ ಸಂಸದರನ್ನು ಸುಲಿಗೆ ಮಾಡುವ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ. ಯುವತಿ ಲಕ್ನೋದಿಂದ 200 ಕಿ.ಮೀ. ದೂರದ ಶಹಜಹಾನ್‌ಪುರದಲ್ಲಿರುವ ಸ್ವಾಮಿ ಸುಖ್‌ದೇವಾನಂದ ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿನಿ.

ಯುವತಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನೆರವು ನೀಡುವಂತೆ ಕೋರುತ್ತಿರುವ ವೀಡಿಯೊ ಕಳೆದ ಮೂರು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ‘‘ಸಂತ ಸಮಾಜದ ದೊಡ್ಡ ನಾಯಕ ಹಲವು ಹೆಣ್ಣು ಮಕ್ಕಳ ಬದುಕನ್ನು ನಾಶ ಮಾಡಿದ್ದಾನೆ. ಈಗ ನನಗೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ. ನನಗೆ ನೆರವು ನೀಡುವಂತೆ ಯೋಗಿಜಿ ಹಾಗೂ ಮೋದಿಜಿ ಅವರಲ್ಲಿ ಮನವಿ ಮಾಡುತ್ತೇನೆ. ನನ್ನ ಕುಟುಂಬವನ್ನು ಕೊಲ್ಲುವುದಾಗಿ ಆತ ಬೆದರಿಕೆ ಒಡ್ಡಿದ್ದಾರೆ. ನಾನು ಹೇಗೆ ಜೀವಿಸುತ್ತಿದ್ದೇನೆ ಎಂದು ನನಗೆ ಮಾತ್ರ ಗೊತ್ತು. ಈ ಸಂತ ಪೊಲೀಸರು ಹಾಗೂ ಜಿಲ್ಲಾ ದಂಡಾಧಿಕಾರಿಯವನ್ನು ತನ್ನ ಜೇಬಿನಲ್ಲಿ ಇರಿಸಿದ್ದಾನೆ. ಆದುದರಿಂದ ಆತ ಬೆದರಿಕೆ ಒಡ್ಡುತ್ತಿದ್ದಾನೆ. ಆದರೆ, ನನ್ನಲ್ಲಿ ಆತನ ವಿರುದ್ಧ ಪುರಾವೆಗಳು ಇವೆ’’ ಎಂದು ಹೇಳುತ್ತಿರುವ ಯುವತಿಯ ವೀಡಿಯೊ ಆಗಸ್ಟ್ 24ರಂದು 4 ಗಂಟೆಗೆ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News