×
Ad

​ಪಾಕ್‌ನಿಂದ ಮತ್ತೆ ವಾಯುಮಾರ್ಗ ಮುಚ್ಚುವ ಎಚ್ಚರಿಕೆ

Update: 2019-08-28 09:18 IST

ಹೊಸದಿಲ್ಲಿ/ ಇಸ್ಲಾಮಾಬಾದ್: ತನ್ನ ವಾಯುಪ್ರದೇಶದ ಮೂಲಕ ಭಾರತಕ್ಕೆ ಬಂದು ಹೋಗುವ ವಾಯುಮಾರ್ಗವನ್ನು ಮುಚ್ಚುವುದಾಗಿ ಪಾಕಿಸ್ತಾನ ಎಚ್ಚರಿಕೆ ನೀಡಿದೆ. ಬಾಲಾಕೋಟ್ ದಾಳಿ ಬಳಿಕ ಮುಚ್ಚಿದ್ದ ವಾಯುಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ ಒಂದೂವರೆ ತಿಂಗಳಲ್ಲೇ ಮತ್ತೆ ಪಾಕಿಸ್ತಾನ ಈ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಈ ನಿರ್ಣಯವನ್ನು ಸಂಪುಟ ಸಹೋದ್ಯೋಗಿ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ.

"ಭಾರತಕ್ಕೆ ತನ್ನ ಸಂಪೂರ್ಣ ವಾಯುಪ್ರದೇಶವನ್ನು ಮುಚ್ಚುವ ಪ್ರಸ್ತಾವನೆಯನ್ನು ಪ್ರಧಾನಿ ಪರಿಶೀಲಿಸುತ್ತಿದ್ದಾರೆ. ಅಪ್ಘಾನಿಸ್ತಾನದ ಜತೆಗೆ ವ್ಯಾಪಾರಕ್ಕಾಗಿ ಭಾರತ ಪಾಕಿಸ್ತಾನದ ಭೂಮಾರ್ಗವನ್ನು ಬಳಸುವುದನ್ನು ಕೂಡಾ ಸಂಪೂರ್ಣವಾಗಿ ನಿಷೇಧಿಸುವ ಸಲಹೆ ಕೂಡಾ ಸಂಪುಟ ಸಭೆಯಲ್ಲಿ ಬಂದಿದ್ದು, ಈ ನಿರ್ಧಾರಗಳ ಕಾನೂನು ವಿಧಿವಿಧಾನಗಳು ಪರಿಶೀಲನೆಯಲ್ಲಿವೆ. ಮೋದಿ ಹ್ಯಾಸ್ ಸ್ಟಾರ್ಟೆಡ್ ವಿ ವಿಲ್ ಫಿನಿಶ್!" ಎಂದು ಟ್ವೀಟ್ ಮಾಡಿದ್ದಾರೆ.

ಈ ಮುನ್ನ ಭಾರತ ಬಾಲಾಕೋಟ್ ದಾಳಿ ನಡೆಸಿದ ಬಳಿಕ 138 ದಿನಗಳ ಕಾಲ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಭಾರತೀಯ ವಿಮಾನಗಳ ಸಂಚಾರಕ್ಕೆ ಮುಚ್ಚಿತ್ತು. ದಕ್ಷಿಣ ಏಷ್ಯಾದ ಇತರ ಭಾಗಗಳು ಹಾಗೂ ದೆಹಲಿಯನ್ನು ಸಂಪರ್ಕಿಸುವ ವಿಮಾನಗಳು ಪಶ್ಚಿಮಾಭಿಮುಖವಾಗಿ ತೆರಳಿ ಮುಂಬೈ- ಅರಬ್ಬಿ ಸಮುದ್ರ, ಮಸ್ಕತ್, ಗಲ್ಫ್ ಮಾರ್ಗದ ಮೂಲಕ ತೆರಳುವುದು ಅನಿವಾರ್ಯವಾಗಿತ್ತು. ಇದು ವಿಮಾನಯಾನ ಸಮಯ ಹೆಚ್ಚಳ ಹಾಗು ವೆಚ್ಚ ಹೆಚ್ಚಳಕ್ಕೆ ಕಾರಣವಾಗಿತ್ತು. ಪೂರ್ವ ಕರಾವಳಿಯಿಂದ ಅಮೆರಿಕಕ್ಕೆ ತೆರಳುವ ವಿಮಾನಗಳಿಗೆ ಕೂಡಾ ಹೆಚ್ಚುವರಿ ಸಮಯ ಹಾಗೂ ಹೆಚ್ಚುವರಿ ನಿಲುಗಡೆ ಅನಿವಾರ್ಯವಾಗಿತ್ತು. ಅಧಿಕ ಇಂಧನ, ಹೆಚ್ಚುವರಿ ಸಿಬ್ಬಂದಿ ಅಗತ್ಯತೆಯ ಕಾರಣದಿಂದಾಗಿ ಯುನೈಟೆಡ್, ಏರ್ ಕೆನಡಾದಂಥ ವಿಮಾನಯಾನ ಸಂಸ್ಥೆಗಳು ಭಾರತಕ್ಕೆ ಸಂಚಾರ ರದ್ದುಗೊಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News