​370ನೆ ವಿಧಿ ರದ್ದು: ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದಿಂದ ಅರ್ಜಿಗಳ ವಿಚಾರಣೆ

Update: 2019-08-28 15:20 GMT

ಹೊಸದಿಲ್ಲಿ,ಆ.28: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ ವಿಧಿ 370ನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವಹಿಸಲು ಸರ್ವೋಚ್ಚ ನ್ಯಾಯಾಲಯವು ಬುಧವಾರ ನಿರ್ಧರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ ಗೊಗೊಯಿ ನೇತೃತ್ವದ ಪೀಠವು ವಿಧಿ 370ನ್ನು ರದ್ದುಗೊಳಿಸಿರುವ ರಾಷ್ಟ್ರಪತಿಗಳ ಆದೇಶವನ್ನು ಪ್ರಶ್ನಿಸಿರುವ ಈ ಅರ್ಜಿಗಳ ಕುರಿತು ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ ನೋಟಿಸ್‌ಗಳನ್ನು ಹೊರಡಿಸಿತು.

ತನ್ನ ಪರವಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಮತ್ತು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯದಲ್ಲಿ ಉಪಸ್ಥಿತರಿರುವುದರಿಂದ ತನಗೆ ನೋಟಿಸ್ ಹೊರಡಿಸುವ ಅಗತ್ಯವಿಲ್ಲ ಎಂಬ ಕೇಂದ್ರದ ವಾದವನ್ನು ನ್ಯಾಯಾಲಯವು ಒಪ್ಪಿಕೊಳ್ಳಲಿಲ್ಲ. ನೋಟಿಸ್ ಜಾರಿಗೊಳಿಸುವಿಕೆಯು ಗಡಿ ರೇಖೆಯ ಪರಿಣಾಮಗಳನ್ನು ಬೀರಲಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಮತ್ತು ಎಸ್.ಎ.ನಝೀರ್ ಅವರನ್ನೂ ಒಳಗೊಂಡ ಪೀಠವು ಹೇಳಿತು. ಈ ಹಂತದಲ್ಲಿ,ನ್ಯಾಯಾಲಯವು ಹೇಳುತ್ತಿರುವುದನ್ನು ವಿಶ್ವಸಂಸ್ಥೆಗೆ ಸಲ್ಲಿಸಲಾಗಿದೆ ಎಂದು ವೇಣುಗೋಪಾಲ ತಿಳಿಸಿದರು.

ಉಭಯ ಕಡೆಗಳ ವಕೀಲರು ವಾದವಿವಾದದಲ್ಲಿ ತೊಡಗಿದಾಗ ಪೀಠವು,‘ ನಾವೇನು ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ.ನಾವು ಆದೇಶವನ್ನು ಹೊರಡಿಸಿದ್ದೇವೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ ’ ಎಂದು ಹೇಳಿತು.

ಎಲ್ಲ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್‌ನಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯವು ತಿಳಿಸಿತು.

ವಿಧಿ 370ನ್ನು ರದ್ದುಗೊಳಿಸಿರುವ ರಾಷ್ಟ್ರಪತಿಗಳ ಆದೇಶವನ್ನು ಪ್ರಶ್ನಿಸಿರುವ ಮೊದಲ ಅರ್ಜಿಯನ್ನು ನ್ಯಾಯವಾದಿ ಎಂ.ಎಲ್.ಶರ್ಮಾ ಅವರು ಸಲ್ಲಿಸಿದ್ದು, ಜಮ್ಮು-ಕಾಶ್ಮೀರದ ವಕೀಲ ಶಕೀರ ಶಬೀರ್ ಅವರು ನಂತರ ಈ ಅರ್ಜಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

ನ್ಯಾಷನಲ್ ಕಾನ್‌ಫರೆನ್ಸ್ ಪರವಾಗಿ ಅರ್ಜಿ ಸಲ್ಲಿಸಿರುವ ಸಂಸದರಾದ ಮುಹಮ್ಮದ್ ಅಕ್ಬರ್ ಲೋನೆ ಮತ್ತು ನ್ಯಾ(ನಿ). ಹಸನೈನ್ ಮಸೂದಿ ಅವರು,ವಿಧಿ 370ರ ರದ್ದತಿಯು ರಾಜ್ಯದ ಪ್ರಜೆಗಳ ಅನುಮತಿಯಿಲ್ಲದೆ ಅವರ ಹಕ್ಕುಗಳನ್ನು ಕಿತ್ತುಕೊಂಡಿದೆ ಎಂದು ವಾದಿಸಿದ್ದಾರೆ.

ಮಾಜಿ ರಕ್ಷಣಾ ಮತ್ತು ಐಎಎಸ್ ಅಧಿಕಾರಿಗಳ ಗುಂಪೊಂದು ಸಲ್ಲಿಸಿರುವ ಅರ್ಜಿಯೂ ಇವುಗಳಲ್ಲಿ ಸೇರಿದ್ದು,ಆ.5ರ ರಾಷ್ಟ್ರಪತಿ ಆದೇಶವನ್ನು ಸಂವಿಧಾನಬಾಹಿರ ಎಂದು ಘೋಷಿಸುವಂತೆ ಕೋರಿದೆ.

ಮಾಜಿ ಐಎಎಸ್ ಅಧಿಕಾರಿ ಹಾಗೂ ಹಾಲಿ ರಾಜಕಾರಣಿ ಶಾ ಫೈಸಲ್ ಮತ್ತು ಅವರ ಪಕ್ಷದ ಸಹೋದ್ಯೋಗಿ ಹಾಗು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕಿ ಶೆಹ್ಲಾ ರಶೀದ್ ಅವರೂ ವಿಧಿ 370ರ ರದ್ದತಿಯನ್ನು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News