ರಾಮಸೇತು ಪ್ರಾಚೀನ ಭಾರತದ 'ಎಂಜಿನಿಯರಿಂಗ್ ಅದ್ಭುತ' ಎಂದ ಕೇಂದ್ರ ಸಚಿವ ಪೊಖ್ರಿಯಾಲ್

Update: 2019-08-28 10:25 GMT

ಖರಗಪುರ: ಭಾರತ ಹಾಗೂ ಶ್ರೀಲಂಕಾವನ್ನು ಸಂಪರ್ಕಿಸುವ ಪಾಕ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ ರಾಮಸೇತು, ಪ್ರಾಚೀನ ಭಾರತ ನಿರ್ಮಿಸಿದ ಎಂಜಿನಿಯರಿಂಗ್ ಅದ್ಭುತ ಎಂದು ಕೇಂದ್ರ ಸಚಿವ ರಮೇಶ್ ಪೊಖ್ರಿಯಾಲ್ ಅಭಿಪ್ರಾಯಪಟ್ಟಿದ್ದಾರೆ.

ಹಿಮಾಲಯ ಶ್ರೇಣಿ ನೀಲಕಂಠನಂತೆ; ಅಭಿವೃದ್ಧಿ ಹೊಂದಿದ ದೇಶಗಳ ಮಲಿನ ಗಾಳಿಯಿಂದ ಭಾರತವನ್ನು ರಕ್ಷಿಸುವ ಸಲುವಾಗಿ ನಿರ್ಮಾಣಗೊಂಡಿದೆ ಎನ್ನುವುದು ಅವರ ಅಭಿಮತ.

ಮಂಗಳವಾರ ನಡೆದ ಖರಗಪುರ ಐಐಟಿ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶದ ಅತಿಬುದ್ಧಿವಂತ ಪದವೀಧರರು ಮತ್ತು ಸಂಶೋಧಕರು ದೇಶದ ಹಿಂದಿನ ಪ್ರಾಚೀನ ಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಉದ್ದೇಶಕ್ಕಾಗಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

"ನಮ್ಮ ಎಂಜಿನಿಯರ್‌ಗಳು ರಾಮಸೇತು ನಿರ್ಮಿಸಿದ್ದಾರೆ ಎಂಬ ಬಗ್ಗೆ ಸಂಶಯ ಇದೆಯೇ? ಅದನ್ನು ನಿರ್ಮಿಸಲು ಅಮೆರಿಕ, ಬ್ರಿಟನ್ ಅಥವಾ ಜರ್ಮನಿಯಿಂದ ಯಾರೂ ಬರಲಿಲ್ಲ" ಎಂದು ಪ್ರತಿಪಾದಿಸಿದರು. "ಸರಿಯಲ್ಲವೇ ? ಮಾತನಾಡಿ; ನೀವೇಕೆ ಮೌನವಿದ್ದೀರಿ? ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಪ್ರೇಕ್ಷಕರಿಂದ ಮಂದ ಪ್ರತಿಕ್ರಿಯೆ ಕಂಡುಬಂತು. ಇದನ್ನು ಗಮನಿಸಿದ ಸಚಿವರು, "ನಾವು ನಮ್ಮ ಗತವೈಭವದ ಬಗ್ಗೆ ಮಾತನಾಡಿದಾಗ ಜನ ನಮ್ಮ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಆದರೆ ಅಂಥ ವಿಷಯಗಳು ಇಲ್ಲಿದ್ದವು" ಎಂದು ಹೇಳಿದರು.

"ನಾವು ಮರಗಳನ್ನು ದೇವರೆಂದು ಪರಿಗಣಿಸುತ್ತೇವೆ ಮತ್ತು ಗಂಗೆಯನ್ನು ಮಾತೆ ಎಂದು ಪೂಜಿಸುತ್ತೇವೆ. ಆದರೆ ಹಿಮಾಲಯ ಪರ್ವತ ನೀಲಕಂಠನಂತೆ; ಶಂಕರ ಭಗವಾನ್‌ನಂತೆ; ಅಭಿವೃದ್ಧಿ ಹೊಂದಿದ ಜಗತ್ತಿನ ಎಲ್ಲ ಮಲಿನ ಗಾಳಿಯನ್ನು ಸೆಳೆದುಕೊಳ್ಳುತ್ತದೆ" ಎಂದು ಅಭಿಪ್ರಾಯಪ್ಟಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News