ಜೈಲಿಗೆ ಹಾಕಿ ನಿಮ್ಮನ್ನು ರಕ್ಷಿಸುತ್ತೇವೆ ಎಂದು ಹೇಳುವುದು ಸ್ವೀಕಾರಾರ್ಹವೇ?: ಕಣ್ಣನ್ ಗೋಪಿನಾಥನ್
►"ಸ್ವಾತಂತ್ರ್ಯವಿಲ್ಲದ ಜೀವನಕ್ಕೆ ಅರ್ಥವಿಲ್ಲ"
ಹೊಸದಿಲ್ಲಿ, ಆ.28: ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಕೇಂದ್ರ ಸರಕಾರ ವಿಧಿಸಿರುವ ನಿರ್ಬಂಧಗಳಿಗೆ ಆಕ್ಷೇಪ ಸೂಚಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಸ್ವಾತಂತ್ರ್ಯವಿಲ್ಲದೇ ಇದ್ದರೆ ಮನುಷ್ಯ ಜೀವನಕ್ಕೆ ಯಾವುದೇ ಅರ್ಥವಿಲ್ಲ ಎಂದಿದ್ದಾರೆ. ಹಿಂಸೆಯಿಂದ ಸಾವುಗಳು ಸಂಭವಿಸದೇ ಇರುವಂತೆ ಮಾಡಲು ನಿರ್ಬಂಧಗಳನ್ನು ಹೇರಲಾಗಿದೆ ಎಂಬ ಕೇಂದ್ರದ ವಾದವನ್ನೂ ಅವರು ತಿರಸ್ಕರಿಸಿದ್ದಾರೆ.
ಎನ್ ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, “ಜೀವನ ಮತ್ತು ಸ್ವಾತಂತ್ರ್ಯ ಜತೆಯಾಗಿಯೇ ಸಾಗುತ್ತದೆ. ಇದುವೇ ಸಂವಿಧಾನಿಕ ಪ್ರಜಾಸತ್ತೆಯ ಸೊಬಗು. ನಿಮ್ಮ ಜೀವನ ರಕ್ಷಿಸಲು ನಿಮ್ಮನ್ನು ಜೈಲಿಗೆ ಹಾಕುವುದಾಗಿ ಹೇಳಿದರೆ ಅದು ನಿಮಗೆ ಸ್ವೀಕಾರಾರ್ಹವೇ?. ಇಂತಹ ವಾದವನ್ನು ಕೆಲ ಸಮಯ ನೀಡಬಹುದು, ಆದರೆ ಇದು ಮೂರು ವಾರಗಳಿಂದ ನಡೆಯುತ್ತಿದೆ'' ಎಂದು ಹೇಳಿದರು.
ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿ ತಮ್ಮ ಮೇಲೆ ಪರಿಣಾಮ ಬೀರದೇ ಇದ್ದರೂ ಅಲ್ಲಿನ ಜನರ ಸಮಸ್ಯೆಗಳ ಬಗ್ಗೆ ತಮಗೆ ಅನುಕಂಪವಿದೆ ಎಂದ ಅವರು, “ನೀವು ಒಂದು ನಿರ್ಧಾರ ಕೈಗೊಳ್ಳಲು ಏನಾದರೂ ನಿಮ್ಮನ್ನು ವೈಯಕ್ತಿಕವಾಗಿ ಬಾಧಿಸಬೇಕೇ?'' ಎಂದೂ ಪ್ರಶ್ನಿಸಿದರು. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಾಗೂ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸುವ ಅಧಿಕಾರ ಸರಕಾರಕ್ಕಿದ್ದರೆ ಪ್ರಜಾಪ್ರಭುತ್ವದಲ್ಲಿ ಸರಕಾರದ ಕ್ರಮಕ್ಕೆ ಪ್ರತಿಕ್ರಿಯಿಸುವ ಹಕ್ಕು ಜನರಿಗಿದೆ ಎಂದು ಅವರು ಹೇಳಿದರು.