ನಿರ್ಮಲಾ ಸೀತಾರಾಮನ್ ಹುಡುಗಾಟ ಬದಿಗಿಟ್ಟು ನಿಜ ಹೇಳಬೇಕು: ಕಪಿಲ್ ಸಿಬಲ್

Update: 2019-08-28 14:10 GMT

ಹೊಸದಿಲ್ಲಿ, ಆ.28: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡುವಾಗ ವಾಕ್ಚಾತುರ್ಯ ಪ್ರದರ್ಶನ ಹಾಗೂ ಹುಡುಗಾಟದ ವರ್ತನೆಯನ್ನು ಬದಿಗಿಟ್ಟು, ಆರ್‌ಬಿಐಯಿಂದ ಕೇಂದ್ರ ಸರಕಾರ 1.76 ಲಕ್ಷ ಕೋಟಿ ಹಣವನ್ನು ಯಾಕೆ ಪಡೆದಿದೆ ಎಂಬ ಬಗ್ಗೆ ದೇಶದ ಜನತೆಗೆ ಉತ್ತರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.

 ಆರ್‌ಬಿಐಯಿಂದ ಸರಕಾರ ಹಣವನ್ನು ಕಳವು ಮಾಡಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದ ನಿರ್ಮಲಾ ಸೀತಾರಾಮನ್, ‘ಚೋರ್ ಅಥವಾ ಚೋರಿ’ ಎಂಬ ಪದವನ್ನು ಬಳಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದನ್ನು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಜನತೆ ಸೂಕ್ತ ರೀತಿಯಲ್ಲಿ ರಾಹುಲ್ ಗಾಂಧಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದರು.

 ನಿರ್ಮಲಾ ಹೇಳಿಕೆಯನ್ನು ಟೀಕಿಸಿರುವ ಸಿಬಲ್, ವಾಕ್ಚಾತುರ್ಯ ಪ್ರದರ್ಶಿಸುವುದು ಪ್ರಬುದ್ಧತೆಯ ಲಕ್ಷಣವಲ್ಲ. ಅದರ ಬದಲು ವಿತ್ತ ಸಚಿವೆ, ಆರ್‌ಬಿಐಯಿಂದ 1.76 ಲಕ್ಷ ಕೋಟಿ ಹಣ ಪಡೆಯುವುದು ಏಕೆ ಎಂಬುದನ್ನು ದೇಶದ ಜನತೆಗೆ ತಿಳಿಸಬೇಕು. ಈ ಹಿಂದೆ ಹೀಗೆ ಆಗಿರಲಿಲ್ಲ. ದೇಶಕ್ಕೆ ಇಂತಹ ಪರಿಸ್ಥಿತಿ ಯಾಕೆ ಬಂದಿದೆ ಎಂಬುದನ್ನು ಅವರು ತಿಳಿಸಬೇಕು ಎಂದಿದ್ದಾರೆ.

 ದೇಶದ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಸುವ ಜವಾಬ್ದಾರಿ ವಿತ್ತ ಸಚಿವರದ್ದಾಗಿದೆ. ಆದರೆ ಬಿಜೆಪಿಯ ವಕ್ತಾರರಂತೆ ಅವರು ಪ್ರತಿಕ್ರಿಯಿಸುತ್ತಿದ್ದಾರೆ. ಆರ್‌ಬಿಐಯಿಂದ ಇಷ್ಟೊಂದು ಮೊತ್ತ ಪಡೆದಿರುವುದನ್ನು ಗಮನಿಸಿದರೆ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಸಂಗ್ರಹ ಕಡಿಮೆಯಾಗಿ ಆದಾಯದ ಬೆಳವಣಿಗೆ ಕುಂಠಿತವಾಗಿರುವುದು ಸ್ಪಷ್ಟವಾಗಿದೆ. ಜಿಎಸ್‌ಟಿ ಸಂಗ್ರಹ ನಿರೀಕ್ಷೆಯಷ್ಟು ಇಲ್ಲ. ದೇಶದಲ್ಲಿ ಅಭಿವೃದ್ಧಿ ಯೋಜನೆಯ ಬಗ್ಗೆ ಯಾವುದೇ ಅಜೆಂಡಾವನ್ನು ಸರಕಾರ ಹೊಂದಿಲ್ಲ. ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹ ಶೇ.7ಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ದೇಶ ಅತ್ಯಂತ ಕಠಿಣ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದು ಸಿಬಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News